ಶನಿವಾರ ನಸುಕಿನ ಜಾವ ದೆಹಲಿಯ ಗೋಕುಲಪುರಿ ಪ್ರದೇಶದ ಗುಡಿಸಲಿನಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸುಮಾರು 60 ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡ ಬಗ್ಗೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕರೆ ಬಂದಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ ತಿಳಿಸಿದೆ. ಈ ಪೈಕಿ 30 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಒಟ್ಟು 13 ಅಗ್ನಿಶಾಮಕ ಟೆಂಡರ್ಗಳು ಸ್ಥಳಕ್ಕೆ ಧಾವಿಸಿದವು ಎಂದು ಇಲಾಖೆ ತಿಳಿಸಿದೆ. ಸ್ಥಳದಲ್ಲಿ ಏಳು ಸುಟ್ಟ ಮೃತದೇಹಗಳು ಪತ್ತೆಯಾಗಿವೆ.
ಕೊನೆಗೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೆಂಕಿಯನ್ನು ನಂದಿಸಲಾಯಿತು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ಈಶಾನ್ಯ) ದೇವೇಶ್ ಕುಮಾರ್ ಮಹ್ಲಾ ತಿಳಿಸಿದ್ದಾರೆ.
ಘಟನೆ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಷಾದ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಜನರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ.
सुबह सुबह ये दुःखद समाचार सुनने को मिला। मैं स्वयं वहाँ जाकर पीड़ित लोगों से मिलूँगा। https://t.co/rcsN6yIse6
— Arvind Kejriwal (@ArvindKejriwal) March 12, 2022
7 ಮೃತದೇಹಗಳನ್ನು ಹೊರತೆಗೆದಿದ್ದು ಗುರುತಿಸಲಾಗದ ಸ್ಥಿತಿಯಲ್ಲಿವೆ, ಗುಡಿಸಲಿನಲ್ಲಿ ಜನರು ಸವಿನಿದ್ದೆಯಲ್ಲಿದ್ದ ಸಮಯದಲ್ಲಿ ಅತ್ಯಂತ ವೇಗವಾಗಿ ಬೆಂಕಿ ಹರಡಿದ್ದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. 60 ಗುಡಿಸಲುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ಹಿಂದಿನ ಕಾರಣಗಳು ನಮಗೆ ಇನ್ನೂ ತಿಳಿದಿಲ್ಲ ಎಂದು ದೆಹಲಿ ಅಗ್ನಿಶಾಮಕ ನಿರ್ದೇಶಕ ದಳ ನಿರ್ದೇಶಕರು ತಿಳಿಸಿದ್ದಾರೆ.