ADVERTISEMENT
ಇವತ್ತಲ್ಲ, ನಾಳೆ ಮುಖ್ಯಮಂತ್ರಿ ಆಗಲೇಬೇಕೆಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಕನಸು ನನಸಾಗುವುದೇ ಅನುಮಾನ. ಡಿಕೆಶಿ ವಿರುದ್ಧ ಮೂರು ಪ್ರಮುಖ ಗಂಭೀರ ಪ್ರಕರಣಗಳು ಅವರ ಮುಖ್ಯಮಂತ್ರಿ ಆಸೆಯನ್ನು ಸುಳ್ಳಾಗಿಸುವ ಸಾಧ್ಯತೆಯೇ ಹೆಚ್ಚು.
ಪ್ರಕರಣ 1:
2017ರಲ್ಲಿ (ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ) ಆದಾಯ ತೆರಿಗೆ ಇಲಾಖೆ ಡಿಕೆಶಿವಕುಮಾರ್ ಅವರ ಮೇಲೆ ದಾಳಿ ನಡೆಸಿತ್ತು. ನವದೆಹಲಿಯಲ್ಲಿ 4 ಕಡೆ ನಡೆದಿದ್ದ ಶೋಧದಲ್ಲಿ 8.57 ಕೋಟಿ ರೂಪಾಯಿ ಮೊತ್ತದ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಬಳಿಕ ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ 429 ಕೋಟಿ ರೂಪಾಯಿಯಷ್ಟು ಅಘೋಷಿತ (ತೆರಿಗೆ ವಂಚಿಸಿದ) ನಗದು ಪತ್ತೆ ಆಗಿದೆ ಎಂದು ಆದಾಯ ತೆರಿಗೆ ಇಲಾಖೆ ತಾನು ಸಲ್ಲಿಸಿದ್ದ ಅರೋಪಪಟ್ಟಿಯಲ್ಲಿ ಹೇಳಿತ್ತು.
ಪ್ರಕರಣ 2:
ಆದಾಯ ತೆರಿಗೆ ಇಲಾಖೆ ಸಲ್ಲಿಸಿದ್ದ ಆರೋಪಪಟ್ಟಿ ಆಧರಿಸಿ ಜಾರಿ ನಿರ್ದೇಶನಾಲಯ ಕೂಡಾ ಡಿಕೆಶಿ ಮೇಲೆ ದಾಳಿ ಮಾಡಿತ್ತು.
ಈಡಿ ಸಲ್ಲಿಸಿದ್ದ ಆರೋಪಪಟ್ಟಿ ಪ್ರಕಾರ 20 ಬ್ಯಾಂಕ್ಗಳಲ್ಲಿ ಡಿಕೆಶಿವಕುಮಾರ್ ಅವರಿಗೆ ಸಂಬಂಧಿಸಿದ 317 ಖಾತೆಗಳಲ್ಲಿ 200 ಕೋಟಿ ರೂಪಾಯಿಯಷ್ಟು ಅಕ್ರಮ ನಗದು (ತೆರಿಗೆ ವಂಚಿಸಿದ ) ಪತ್ತೆಯಾಗಿದೆ ಎಂದು ಹೇಳಿತ್ತು.
ಅಲ್ಲದೇ, ಜೊತೆಗೆ ಡಿಕೆಶಿ ಅವರು 800 ಕೋಟಿ ರೂಪಾಯಿಯಷ್ಟು ಮೌಲ್ಯದ ಬೇನಾಮಿ (ಅನ್ಯರ ಹೆಸರಲ್ಲಿ ಮಾಡಲಾಗುವ ಆಸ್ತಿ) ಆಸ್ತಿಯನ್ನು ಹೊಂದಿದ್ದು, ಆ ಬಗ್ಗೆ ಈಡಿ ದಾಖಲೆಗಳನ್ನು ಸಲ್ಲಿಸಿತ್ತು.
ಅಕ್ಟೋಬರ್ 3, 2019ರಂದು ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದ ಡಿಕೆಶಿ ತಿಹಾರ್ ಜೈಲಿನಲ್ಲಿ ಕಾಲ ಕಳೆದಿದ್ದರು.
ಪ್ರಕರಣ 3:
ಆದಾಯ ತೆರಿಗೆ ಇಲಾಖೆ ಮತ್ತು ಈಡಿ ಸಲ್ಲಿಸಿದ್ದ ಆರೋಪಪಟ್ಟಿ ಆಧರಿಸಿ ಡಿಕೆಶಿವಕುಮಾರ್ ವಿರುದ್ಧ ದೇಶದ ಅತ್ಯುನ್ನತ ತನಿಖಾ ಸಂಸ್ಥೆ (ಸಿಬಿಐ) ಎಫ್ಐಆರ್ ದಾಖಲಿಸಿಕೊಂಡಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ವೇಳೆ ಸಾರ್ವಜನಿಕ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎನ್ನುವುದು ಸಿಬಿಐ ಆರೋಪ.
ಅಕ್ರಮ ಆಸ್ತಿ ಗಳಿಕೆ ಅಥವಾ ಭ್ರಷ್ಟಾಚಾರದ ಆರೋಪದಡಿ 2020ರ ಸೆಪ್ಟೆಂಬರ್ 3ರಂದು ಸಿಬಿಐ ಕರ್ನಾಟಕ, ದೆಹಲಿ ಮತ್ತು ಮುಂಬೈನಲ್ಲಿ ಶೋಧ ನಡೆಸಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಇನ್ನೂ ಡಿಕೆಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಆದರೆ ಅವರ ಕುಟುಂಬ ಸದಸ್ಯರು ವಿಶೇಷವಾಗಿ ಮಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಸಿಬಿಐ ತನಿಖೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೆ ಕರ್ನಾಟಕ ಹೈಕೋರ್ಟ್ನ ಮಧ್ಯಂತರ ಆದೇಶದ ವಿರುದ್ಧ ಸಿಬಿಐ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದೆ. ಸುಪ್ರೀಂಕೋರ್ಟ್ನಲ್ಲಿ ಜುಲೈ 14ರಂದು ಮುಂದಿನ ವಿಚಾರಣೆ ನಡೆಯುವುದಕ್ಕೂ ಮೊದಲು ಸಿಬಿಐ ತನಿಖೆ ಪ್ರಶ್ನಿಸಿ ಡಿಕೆಶಿ ಸಲ್ಲಿಸಿರುವ ಅರ್ಜಿಯ ಸಂಬಂಧ ಅಂತಿಮ ಆದೇಶ ಹೊರಬೀಳಬಹುದು.
ಮೂರು ಪ್ರಕರಣಗಳೂ ಭಿನ್ನ:
ಅಂದಹಾಗೆ ಮೂರು ಪ್ರಕರಣಗಳೂ ಭಿನ್ನ. ಆದಾಯ ತೆರಿಗೆ ದಾಖಲಿಸಿರುವ ಪ್ರಕರಣ ಅಪಾರ ಪ್ರಮಾಣದಲ್ಲಿ ತೆರಿಗೆ ವಂಚನೆಗೆ ಸಂಬಂಧಿಸಿದ್ದು, ಈಡಿ ದಾಖಲಿಸಿರುವ ಪ್ರಕರಣ ಅಕ್ರಮ ಹಣ ವರ್ಗಾವಣೆ ಮೂಲಕ ತೆರಿಗೆ ವಂಚನೆ ಮತ್ತು ಬೇನಾಮಿ ಆಸ್ತಿಗಳ ಸಂಗ್ರಹಕ್ಕೆ ಸಂಬಂಧಿಸಿದ್ದು, ಸಿಬಿಐ ದಾಖಲಿಸಿರುವ ಪ್ರಕರಣ ಸಾರ್ವಜನಿಕ ಹುದ್ದೆಯನ್ನು ದುಬರ್ಳಕೆ ಮಾಡಿಕೊಂಡು ( ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದಾಗ ) ಅಕ್ರಮವಾಗಿ ಸಂಪತ್ತು ಸಂಗ್ರಹಿಸಿ ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವುದು.
ADVERTISEMENT