ಕೇಂದ್ರ ಚುನಾವಣಾ ಆಯೋಗ ಶನಿವಾರ ಮಾರ್ಚ್ 7ರ ವರೆಗೆ ಚುನಾವಣೋತ್ತರ ಸಮೀಕ್ಷೆಗಳ ಡೇಟಾವನ್ನು ಪ್ರಕಟಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದ ಪಂಚರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಹೊಸ ಆದೇಶ ಹೊರಬಿದ್ದಿದೆ.
ಅಧಿಕೃತ ಅಧಿಸೂಚನೆಯಲ್ಲಿ, ಮಾರ್ಚ್ 7 ರ ವರೆಗೆ ಪಂಚ ರಾಜ್ಯ ವಿಧಾನಸಭಾ ಚುನಾವಣೆಗಳ ಚುನಾವಣೋತ್ತರ ( ಮತದಾನೋತ್ತರ) ಸಮೀಕ್ಷೆಯನ್ನು ಮುದ್ರಣ, ವಿದ್ಯುನ್ಮಾನ ಹಾಗೂ ಇನ್ಯಾವುದೇ ರೀತಿಯಲ್ಲಿ ಪ್ರಕಟಿಸಬಾರದು ಎಂದು ಚುನಾವಣಾ ಆಯೋಗ ಹೇಳಿದೆ.
ಮಾರ್ಗಸೂಚಿಗಳು ಫೆಬ್ರವರಿ 10 ರಂದು ಬೆಳಿಗ್ಗೆ 7ರಿಂದ ಜಾರಿಗೆ ಬರಲಿದ್ದು, ಮಾರ್ಚ್ 7ರಂದು ಸಂಜೆ 6:30 ರವರೆಗೆ ಜಾರಿಯಲ್ಲಿರುತ್ತದೆ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ, ಮತದಾನದ ಮೊದಲ ದಿನದಂದು ಮತದಾನಕ್ಕೆ ನಿಗದಿಪಡಿಸಿದ ಗಂಟೆಗಳ ಪ್ರಾರಂಭದಿಂದ ಅವಧಿಯು ಪ್ರಾರಂಭವಾಗಬಹುದು ಮತ್ತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಮುಗಿದ ಅರ್ಧ ಗಂಟೆ ವರೆಗೆ ಮುಂದುವರಿಯಬಹುದು ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಗಂಟೆಗಳೊಂದಿಗೆ ಕೊನೆಗೊಳ್ಳುವ 48 ಗಂಟೆಗಳ ಅವಧಿಯಲ್ಲಿ ಯಾವುದೇ ವಿದ್ಯುನ್ಮಾನ ಮಾಧ್ಯಮದಲ್ಲಿ ಯಾವುದೇ ಅಭಿಪ್ರಾಯ ಸಂಗ್ರಹ ಅಥವಾ ಇತರ ಯಾವುದೇ ಸಮೀಕ್ಷೆಯ ಫಲಿತಾಂಶಗಳು ಸೇರಿದಂತೆ ಯಾವುದೇ ಚುನಾವಣಾ ವಿಷಯವನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಸಮಿತಿಯು ಸೇರಿಸಿದೆ.ಈ ಸೆಕ್ಷನ್ನ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳ ವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಅಧಿಸೂಚನೆಯಲ್ಲಿ ಹೇಳಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ, ಮಣಿಪುರದಲ್ಲಿ ಫೆಬ್ರವರಿ 27 ರಿಂದ ಎರಡು ಹಂತಗಳಲ್ಲಿ, ಪಂಜಾಬ್ನಲ್ಲಿ ಫೆಬ್ರವರಿ 20 ರಂದು, ಉತ್ತರಾಖಂಡ ಮತ್ತು ಗೋವಾ ಚುನಾವಣೆಗಳು ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ನಡೆಯಲಿವೆ. ಮಾರ್ಚ್ 10 ರಂದು ಎಲ್ಲ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.