ಆನ್ಲೈನ್ ಗೇಮ್ ಪಬ್ಜಿ (PUBG) ಹುಚ್ಚಿಗೆ ಬಿದ್ದ 14 ವರ್ಷದ ಬಾಲಕನೊಬ್ಬ ತನ್ನ ತಾಯಿ, ಅಣ್ಣ ಮತ್ತು ಇಬ್ಬರು ಅಪ್ರಾಪ್ತ ಸಹೋದರಿಯರು ಸೇರಿದಂತೆ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಕಳೆದ ವಾರ ಲಾಹೋರ್ನ ಕಹ್ನಾ ಪ್ರದೇಶದಲ್ಲಿ 45 ವರ್ಷದ ಆರೋಗ್ಯ ಕಾರ್ಯಕರ್ತೆ ನಹೀದ್ ಮುಬಾರಕ್ ತನ್ನ 22 ವರ್ಷದ ಮಗ ತೈಮೂರ್ ಮತ್ತು 17 ಮತ್ತು 11 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ಶವವಾಗಿ ಪತ್ತೆಯಾಗಿದ್ದರು. ಪಬ್ಜಿ (PUBG) ವ್ಯಸನಿಯಾಗಿದ್ದ ಹುಡುಗ ಆಟದ ಪ್ರಭಾವದಿಂದ ತನ್ನ ತಾಯಿ ಮತ್ತು ಸಹೋದರರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ದಿನದ ಹೆಚ್ಚಿನ ಸಮಯವನ್ನು ಆನ್ಲೈನ್ ಆಟವಾಡುತ್ತಾ ಕಳೆಯುವುದರಿಂದ ಆತ ಕೆಲವು ಮಾನಸಿಕ ಸಮಸ್ಯೆಗಳನ್ನು ಬೆಳೆಸಿಕೊಂಡಿದ್ದ ಎಂದು ಹೇಳಲಾಗಿದೆ.
ನಹೀದ್ ವಿಚ್ಛೇದಿತೆಯಾಗಿದ್ದು, ತಪಬ್ಜಿ ಆಟದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವುದಕ್ಕಾಗಿ ಆಗಾಗ ಮಗನಿಗೆ ಬುದ್ಧಿ ಹೇಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ದಿನ ನಹೀದ್ ಈ ವಿಷಯದ ಬಗ್ಗೆ ಹುಡುಗನಿಗೆ ಬೈದಿದ್ದರು. ಇದರಿಂದ ಕೋಪಗೊಂಡ ಆ ಹುಡುಗನು ತನ್ನ ತಾಯಿಯ ಪಿಸ್ತೂಲ್ ಅನ್ನು ಕಬೋರ್ಡ್ನಿಂದ ತೆಗೆದು ಅವಳನ್ನು ಕೊಲೆ ಮಾಡಿದ್ದ. ಹಾಗೆಯೇ ನಿದ್ರೆಯಲ್ಲಿದ್ದ ಇಬ್ಬರು ಸೋದರಿಯರನ್ನು ಶೂಟ್ ಮಾಡಿದ್ದ. ಮರುದಿನ ಬೆಳಿಗ್ಗೆ ಆ ಹುಡುಗ ಜೋರಾಗಿ ಕಿರುಚಾಡಿ ನೆರೆಹೊರೆಯವರನ್ನು ಕರೆದಿದ್ದ. ಅಕ್ಕಪಕ್ಕದ ಮನೆಯವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದರು.
ಡಾನ್ ಪತ್ರಿಕೆಯ ವರದಿಯ ಪ್ರಕಾರ, ಲಾಹೋರ್ನಲ್ಲಿ ಆನ್ಲೈನ್ ಆಟಕ್ಕೆ ಸಂಬಂಧಿಸಿದಂತೆ ಇದು ನಾಲ್ಕನೇ ಅಪರಾಧವಾಗಿದೆ. 2020 ರಲ್ಲಿ ಪಬ್ಜಿ ಕಾರಣಕ್ಕೆ ಮೊದಲ ಸಾವಿನ ಪ್ರಕರಣ ಕಾಣಿಸಿಕೊಂಡಾಗ ಅಂದಿನ ಪೊಲೀಸ್ ಅಧಿಕಾರಿ ಜುಲ್ಫಿಕರ್ ಹಮೀದ್ ಪಬ್ಜಿ ಆಟವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದ್ದರು.