ಹಿಜಾಬ್ ಧರಿಸಲು ಅನುಮತಿ ನೀಡದ್ದಕ್ಕೆ ಬೆಳಗಾವಿಯ ಸದಾಶಿವನಗರದ ವಿಜಯ ಪ್ಯಾರಾಮೆಡಿಕಲ್ ಆಪ್ ಸೈನ್ಸ್ ಕಾಲೇಜು ಬಳಿ ಗುರುವಾರ ತೀವ್ರ ಆತಂಕ ಸೃಷ್ಠಿಯಾಗಿತ್ತು. ಹಿಜಾಬ್ ಪರವಾಗಿ 6 ಜನ ಯುವಕರು ‘ಅಲ್ಲಾಹು ಅಕ್ಬರ್’ ಅಂತಾ ಘೋಷಣೆ ಕೂಗಿ ಹೈಡ್ರಾಮಾ ನಡೆಸಿದ್ದಾರೆ. ಕಾಲೇಜು ಬಳಿ ಆತಂಕ ಸೃಷ್ಠಿಸಿದ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಲೇಜಿನ ತರಗತಿಯೊಳಗೆ ಹಿಜಾಬ್ ಗೆ ಅವಕಾಶ ಇಲ್ಲ ಎಂದು ಕಾಲೇಜು ಸಿಬ್ಬಂದಿ ಹೇಳುತ್ತಿದ್ದಂತೆ ವಿದ್ಯಾರ್ಥಿನಿಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಸುಮಾರು 20 ವಿದ್ಯಾರ್ಥಿನಿಯರು ತರಗತಿಯಲ್ಲಿ ಹಿಜಾಬ್ಗೆ ಅವಕಾಶ ನೀಡುವಂತೆ ಪಟ್ಟುಹಿಡಿದ್ದಾರೆ. ಆದರೆ ಕಾಲೇಜು ಆಡಳಿತ ಮಂಡಳಿ ಕೋರ್ಟ್ ಆದೇಶ ಪಾಲನೆ ಮಾಡುವಂತೆ ಅವರಿಗೆ ಸೂಚಿಸಿದೆ. ಆಗ ವಿದ್ಯಾರ್ಥಿನಿಯರು ಕ್ಲಾಸ್ಗೆ ಬಹಿಷ್ಕಾರ ಹಾಕಿದ್ದಾರೆ.
ನಂತರ ಕಾಲೇಜಿನತ್ತ ಯುವಕರ ಗುಂಪು ಆಗಮಿಸಿದೆ. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ. ಅಲ್ಲದೆ, ಪ್ರಾಂಶುಪಾಲರ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಯುವಕರು ಸ್ಥಳಕ್ಕೆ ಬಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ರವೀಂದ್ರ ಗಡಾದಿ ವಿದ್ಯಾರ್ಥಿಗಳ ಮನವೊಲಿಸಲು ಯತ್ನಿಸಿದರು. ಈ ವೇಳೆ ಕೆಲ ಯುವಕರು ಅಲ್ಲಾಹು ಅಕ್ಬರ್ ಅಂತಾ ಘೋಷಣೆ ಕೂಗಿ ಗೊಂದಲ ಸೃಷ್ಟಿಸಿದರು. ನಂತರ ಆರು ಜನ ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.