ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಮೇಲೆ ಕೇಳಿ ಬರುತ್ತಿರುವ ಅಕ್ರಮ ಆಸ್ತಿ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಇಂದು ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಅವರ ವಿರುದ್ದ ಆರೋಪ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಯಾರು ಬೇಕಾದರೂ ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ಆದರೆ, ಬಂದ ದೂರಿನ ಆಧಾರದಲ್ಲಿ ತನಿಖೆ ಶುರುವಾಗಿದೆ ಎಂದು ಹೇಳಿದ್ದಾರೆ.
ರವಿ ಡಿ ಚನ್ನಣ್ಣನವರ್ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ವರ್ಗಾವಣೆ ಆಡಳಿತಾತ್ಮಕ ನಿರ್ಧಾರ ಅಷ್ಟೇ. ಅದು ಶಿಕ್ಷೆ ಅಥವಾ ಬೇರೆ ಇನ್ನೇನೋ ಅಲ್ಲ. ಸದ್ಯ ವರ್ಗಾವಣೆ ತಡೆ ಮಾಡಿರುವುದು ಬಂದ ಆರೋಪಗಳ ಆಧಾರ ಮೇಲೆ ಅಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ರವಿಯವರು ಆರೋಪ ಮಾಡಿದವರ ಮೇಲೆ ಕೋರ್ಟ್ನಲ್ಲಿಯೂ ಮಾನನಷ್ಠ ಮೊಕದ್ದಮೆ ದಾಖಲು ಮಾಡಿದ್ದಾರೆ. ಐಪಿಎಸ್ ಅಧಿಕಾರಿಯ ಮೇಲೆ ಆರೋಪಗಳ ಕೇಳಿ ಬಂದ ಬೆನ್ನಲ್ಲೇ, ರಾಜ್ಯ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ. ಆದರೆ, ಇದುವರೆಗೂ ಸ್ಥಳ ತೋರಿಸಿಲ್ಲ.