ಡಾ.ರಾಜ್ಕುಮಾರ್ ಕುಟುಂಬ ಹೆಣ್ಣುಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮೈಸೂರಿನಲ್ಲಿ ಸ್ಥಾಪಿಸಿದ್ದ ಶಕ್ತಿಧಾಮದ ನಿರ್ವಹಣೆಯನ್ನು ನಟ ಪುನೀತ್ ರಾಜ್ಕುಮಾರ್ ಅವರು ನೋಡಿಕೊಳ್ಳುತ್ತಿದ್ದರು. ಇದೀಗ ಅವರು ದಿವಂಗತವಾದ ನಂತರ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಅವರು ಶಕ್ತಿಧಾಮದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ನಟ ಶಿವರಾಜ್ಕುಮಾರ್ ಅವರೇ ಹೇಳಿದ್ದಾರೆ.
ಸರ್ಕಾರ ಕೊರೋನಾ ನಿಯಂತ್ರಣಕ್ಕೆ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡಿದೆ. ಆದರೆ, ಸಿನಿಮಾ ಮಂದಿರಗಳಿಗೆ 50:50 ರೂಲ್ಸ್ ಅನ್ನು ಹಾಗೆಯೇ ಮುಂದುವರೆಸಲಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆನ್ನೆಯಷ್ಟೇ ನಾನು ಈ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ನಾವು ಕೊರೋನಾದ ಜೊತೆ ಜೊತೆಗೆ ಬದುಕಬೇಕಿದೆ. ಅದರ ಜೊತೆಗೆ ಬದುಕಬೇಕಾದ ಅನಿವಾರ್ಯತೆ ಇದೆ. ಎಲ್ಲ ಕ್ಷೇತ್ರಗಳಿಗೂ 50:50 ರೂಲ್ಸ್ ನಿಂದ ರಿಲ್ಯಾಕ್ಸ್ ಕೊಡಲಾಗಿದೆ. ಆದರೆ ಸಿನಿಮಾ ಮಂದಿರಗಳಿಗೆ ಯಾಕೆ ರಿಲ್ಯಾಕ್ಸ್ ಕೊಟ್ಟಿಲ್ಲ ಎಂದು ಗೊತ್ತಿಲ್ಲ.
ಈ ಬಗ್ಗೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ನಮಗೆ ಸಾಕಷ್ಟು ಬಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಈಗಲೂ ನಮಗೆ ಅನುಕೂಲ ಮಾಡಿಕೊಡುವ ಬರವಸೆ ಇದೆ ಎಂದು ಹೇಳಿದರು.
ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡ ಅವರು, ಅಪ್ಪು ನಿಧನ ನೆನಸಿಕೊಂಡಾಗೆಲ್ಲ, ನಮ್ಮ ಧ್ವನಿಯೇ ಬದಲಾಗುತ್ತದೆ. ಆ ನೋವನ್ನ ಸಂಪೂರ್ಣವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲು ಇಲ್ಲ. ಆ ನೋವಿನ ಜೊತೆಗೆ ಬದುಕುತ್ತಿದ್ದೇವೆ. ಮುಂದೆಯು ನೋವಿನ ಜೊತೆಗೆ ಬದುಕುತ್ತೇವೆ. ಅಪ್ಪುದು ಅದ್ಭುತವಾದ ಆತ್ಮ’ ಹೀಗಾಗಿಯೇ ಅಪ್ಪುವನ್ನ ಜನ ಈಗಲು ನೆನಪಿಸಿಕೊಂಡು ಇಷ್ಟಪಡುತ್ತಾರೆ.
ಅಪ್ಪು ಗಳಿಸಿರುವ ಈ ಪ್ರೀತಿ ಕಂಡು ನನಗೆ ಹೆಮ್ಮೆ ಆಗುತ್ತಿದೆ. ಶಕ್ತಿಧಾಮಕ್ಕೆ ಇತ್ತೀಚೆಗೆ ನಾನು ಹೆಚ್ಚಾಗಿ ಬರುತ್ತಿದ್ದೇನೆ. ನಮ್ಮ ಮನಸ್ಸುಗಳಿಗು ಒಂದು ಬದಲಾವಣೆ ಆಗುತ್ತದೆ. ಮಕ್ಕಳಿಗು ಹೊಸ ಅನುಭವ ಆಗುತ್ತದೆ. ಗೀತಾ ಶಿವರಾಜಕುಮಾರ್ ಈಗ ಶಕ್ತಿಧಾಮದ ಸಂಪೂರ್ಣ ಜವಬ್ದಾರಿ ಹೊತ್ತಿದ್ದಾರೆ. ಆದಷ್ಟು ಬೇಗ ಶಕ್ತಿಧಾಮದಲ್ಲಿ ಶಾಲೆ ಆರಂಭಿಸಲು ಅನುಮತಿ ಸಿಗುತ್ತದೆ. ಅದರ ದೊಡ್ಡ ಜವಬ್ದಾರಿಯೇ ನಮ್ಮ ಮೇಲಿದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.