ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಭಿತಿ ದಿನೇ ದಿನೇ ಎಚ್ಚುತ್ತಿರುವ ಬೆನ್ನಲ್ಲೇ, ಭಾರತೀಯರ ತೀರಾ ಅಗತ್ಯವಿಲ್ಲದಿದ್ದರೆ ಕೂಡಲೇ ಭಾರತಕ್ಕೆ ಹಿಂದಿರುಗಬೇಕು ಎಂದು ಉಕ್ರೇನ್ನಲ್ಲಿರು ಭಾರತೀಯ ರಾಯಭಾರ ಕಚೇರಿಯು ಇಂದು ಭಾನುವಾರ ಹೇಳಿದೆ.
ಉಕ್ರೇನ್ನಲ್ಲಿನ ಪರಿಸ್ಥಿತಿ ಉದ್ವಿಗ್ನತೆ ಮತ್ತು ಅನಿಶ್ಚಿತತೆಗಳಿಂದ ಕೂಡಿದೆ. ಹೀಗಾಗಿ ಇಲ್ಲಿ ಉಳಿದುಕೊಳ್ಳುವುದು ಅನಿವಾರ್ಯವಲ್ಲ ಎಂದಾದರೆ, ಭಾರತೀಯ ಪ್ರಜೆಗಳು ಮತ್ತು ಭಾರತೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ನಿಂದ ಹೊರಹೋಗುವಂತೆ ಸೂಚಿಸಲಾಗುತ್ತಿದೆ ಎಂದು ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ನಡೆಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಭಾರತೀಯರು ಯಾವುದೇ ವಾಣಿಜ್ಯ ವಿಮಾನ ಅಥವಾ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಹಿಂದಿರುಗಬಹುದು. ಭಾರತೀಯ ವಿದ್ಯಾರ್ಥಿಗಳು ಚಾರ್ಟರ್ ಫ್ಲೈಟ್ಗಳ ಮಾಹಿತಿಗಳನ್ನು ಪಡೆಯುವಂತೆಯೂ, ರಾಯಭಾರ ಕಚೇರಿಯ ಫೇಸ್ಬುಕ್, ವೆಬ್ಸೈಟ್ ಮತ್ತು ಟ್ವಿಟರ್ಗಳ ಮೇಲೆ ಗಮನ ಇಟ್ಟಿರುವಂತೆಯೂ ಸೂಚಿಸಲಾಗಿದೆ.
ADVISORY FOR INDIAN NATIONALS IN UKRAINE.@MEAIndia @DrSJaishankar @PIBHindi @DDNewslive @DDNewsHindi @IndianDiplomacy @PTI_News @IndiainUkraine pic.twitter.com/i3mZxNa0BZ
— India in Ukraine (@IndiainUkraine) February 20, 2022
ಮಾಹಿತಿ ಮತ್ತು ಸಹಾಯದ ಅಗತ್ಯವಿರುವ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಥವಾ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು ಎಂದು ಹೇಳಲಾಗಿದೆ. ಉಕ್ರೇನ್ನಲ್ಲಿರುವ ಭಾರತೀಯರಿಗೆ ವಿಮಾನದ ಟಿಕೆಟ್ಗಳು ಸಿಗುತ್ತಿಲ್ಲ ಎಂಬ ಸಂಗತಿ ಈ ವಾರದ ಆರಂಭದಲ್ಲಿ ವರದಿಯಾಗಿತ್ತು.
ಉಕ್ರೇನ್ನ ಗಡಿಯಲ್ಲಿ ರಷ್ಯಾ ತನ್ನ ಸೈನ್ಯವನ್ನು ಜಮಾವಣೆ ಮಾಡಿದೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಭೀತಿಯುಂಟಾದ ಮೇಲೆ ಅಮೇರಿಕಾ ತನ್ನ ನಾಗರೀಕರಿಗೆ ಉಕ್ರೇನ್ ಬಿಟ್ಟು ತೆರಳುವಂತೆ ಸೂಚಿಸಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ‘ಶಾಂತ ಮತ್ತು ರಚನಾತ್ಮಕ ರಾಜತಾಂತ್ರಿಕತೆ’ ಈ ಸಮಯದ ಅಗತ್ಯವಾಗಿದೆ ಮತ್ತು ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದೇ ಹೆಜ್ಜೆಯನ್ನು ತಪ್ಪಿಸಬೇಕು ಎಂದು ಭಾರತ ಹೇಳಿದ ಒಂದು ದಿನದ ನಂತರ ರಷ್ಯಾವು ಭಾರತದ ನಿಲುವನ್ನು ಸ್ವಾಗತಿಸಿತ್ತು.
ಉಕ್ರೇನ್ 1917 ರಲ್ಲಿ ಸ್ವತಂತ್ರ ದೇಶವೆಂದು 1917ರ ಡಿಸೆಂಬರಿನಲ್ಲಿ ಸೋವಿಯತ್ ಗಣರಾಜ್ಯವೆಂದು ಘೋಷಿಸಿ ಕೊಂಡಿತು. ಆದಾಗ್ಯೂ, ಈ ದೇಶ ರಷ್ಯಾದ ಆಳ್ವಿಕೆಯಲ್ಲಿಯೇ ಇತ್ತು. 1991ರಲ್ಲಿ ಉಕ್ರೇನ್ ರಷ್ಯಾದಿಂದ ಅಧಿಕೃತವಾಗಿ ವಿಭಜನೆಯಾಗಿ ವಿಶ್ವಸಂಸ್ಥೆಯಲ್ಲಿ ಸ್ವತಂತ್ರ ಗಣರಾಜ್ಯವಾಗಿ ಗುರುತಿಸಿಕೊಂಡಿತು. ಇದೀಗ, ರಷ್ಯಾ ಉಕ್ರೇನ್ ಅನ್ನು ಮತ್ತೆ ತನ್ನ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ.