ಸುಹಾಸ್ತಿ ಯುವ ಜೈನ್ ಮಿಲನ್ ಬೆಂಗಳೂರು ಮತ್ತು ಜೈನ್ ಮಿಲನ್ ದುಬೈ ಇವರ ಜಂಟಿ ಆಯೋಜನೆಯ ಅಂತರಾಷ್ಟ್ರೀಯ ಜಿನಸಮ್ಮಿಲನ ದುಬೈ – ೨೦೨೨ ದುಬೈನಲ್ಲಿ ವೈಭವವಾಗಿ ನಡೆಯಿತು. ಜಿನಸಮ್ಮಿಲನವು ಇದೇ ಮೊದಲ ಬಾರಿಗೆ ಹೊರದೇಶದಲ್ಲಿ ನಡೆದು ಜಿನ ಧರ್ಮದ ಪ್ರಭಾವನೆ ವಿದೇಶದಲ್ಲಿ ಅಪೂರ್ವವಾಗಿ ಮೊಳಗಿತು.
ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಸಾಹಿತಿ ನಾಡೋಜ ಹಂಪನಾ ಅವರು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯದ ಫಲದಿಂದಾಗಿ ಇಂತಹಾ ವೈಭವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಿದೆ , ಇಂತಹಾ ಸಮಯದಲ್ಲಿ ನಮ್ಮ ಧರ್ಮಕ್ಕಾಗಿ ದುಡಿದ ಪೂರ್ವಜರನ್ನು ಸ್ಮರಿಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಎಂದರು. ನಾವೆಲ್ಲರೂ ಸಂಘಟಿತರಾಗಿ ಜಿನ ಧರ್ಮದ ಅಭ್ಯುದಯದಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳಬೇಕು ಎಂದು ಜೈನ ಸಮಾಜಕ್ಕೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಂತರಾಷ್ಟ್ರೀಯ ಜೈನ್ ಮಿಲನ್ ನ ಕಾರ್ಯಾಧ್ಯಕ್ಷರಾದ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಅವರು ಇಂತಹಾ ಮಹೋನ್ನತ ಕಾರ್ಯಕ್ರಮಕ್ಕಾಗಿ ಅಹರ್ನಿಶಿ ದುಡಿದ ದುಬೈ ಜೈನ್ ಮಿಲನ್ ಹಾಗೂ ಸುಹಾಸ್ತಿ ಯುವ ಜೈನ್ ಮಿಲನ್ ಸದಸ್ಯರೆಲ್ಲರನ್ನು ಹತ್ತಿರ ಕರೆದು ಬೆನ್ನುತಟ್ಟಿ ಪ್ರಶಂಸಿದರು. ಈ ಜಿನಸಮ್ಮಿಲನ ಅವಿರತವಾಗಿ ದೇಶ ವಿದೇಶಗಳಲ್ಲಿ ಇನ್ನೂ ಮುಂದೆಯೂ ವೈಭವವಾಗಿ ನಡೆಯಲಿ ಹಾಗೂ ಇದಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಕರೆಕೊಟ್ಟರು. ಈ ಮೂಲಕ ಪ್ರತಿಯೊಬ್ಬರೂ ಜೈನ ಧರ್ಮವನ್ನು ತಿಳಿದುಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.
ಆಶೀರ್ವಚನವನ್ನು ದಯಪಾಲಿಸಿದ ನರಸಿಂಹರಾಜಪುರ ಕ್ಷೇತ್ರದ ಪ.ಪೂ ಸ್ವಾಮೀಜಿಯವರು ಜಿನ ಧರ್ಮದ ಅನುಯಾಯಿಗಳು ಬಹಳ ಪುರಾತನ ಕಾಲದಿಂದಲೂ ಸೀಮೋಲ್ಲಂಘನಗೈದ ಉದಾಹರಣೆಗಳಿವೆ. ವ್ಯಾಪಾರದ ನಿಮಿತ್ತ ವಿದೇಶಕ್ಕೆ ಹೋಗುತ್ತಿದ್ದ ಜೈನ ಬಾಂಧವರು ಧರ್ಮ ಪ್ರಭಾವನೆಯನ್ನು ಮಾಡುತ್ತಿದ್ದರು ಎಂದರು. ವಿಶ್ವದ ಎಲ್ಲಾ ಜೈನರನ್ನು ಒಗ್ಗೂಡಿಸುವ ಈ ಜಿನ ಸಮ್ಮಿಲನ ಅನವರತವಾಗಿ ನಡೆಯಲಿ ಎಂದು ಕರೆ ನೀಡಿದರು.
ಈ ಭವ್ಯಸಮಾರಂಭದಲ್ಲಿ ಎಸ್ ಪಿ ಪದ್ಮಪ್ರಸಾದ್ ಅವರ ಜೈನ ಸಾಹಿತ್ಯ ಚರಿತ್ರೆ, ಜಯಲಕ್ಷ್ಮೀ ಅಭಯಕುಮಾರ್ ಅವರ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ. ಅಧಿಕಾರಿ ಎಂಬ ಎರಡು ಗ್ರಂಥಗಳನ್ನು ಹಾಗೂ ನೇರೇಂಕಿ ಪಾರ್ಶ್ವನಾಥ್ ಅವರ ವೆಬ್ ಸೈಟ್ ಹಾಗೂ ಪೋಷ್ಟಲ್ ಕಾರ್ಡ್ ಲೋಕಾರ್ಪಣೆಯನ್ನು ವಿವಿಧ ಗಣ್ಯರು ನೆರವೇರಿಸಿಕೊಟ್ಟರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಯಂಗ್ ಅಚೀವರ್ – ಆಶಯ್ ಜೈನ್ ದುಬೈ, ಬೆಷ್ಟ್ ಸಿಂಗರ್ – ಡಾ. ಸ್ನೇಹಶ್ರೀ ನಿರ್ಮಲ್ ಕುಮಾರ್ ಮೈಸೂರು, ಜೈನ್ ಫೋಟೋಗ್ರಫಿ – ನೇರೆಂಕಿ ಪಾರ್ಶ್ವನಾಥ್ ಮೂಡುಬಿದಿರೆ, ಯೂತ್ ಐಕಾನ್ – ಮಾಳ ಹರ್ಷೇಂದ್ರ ಜೈನ್, ಮಹಿಳಾ ಸಾಧಕಿ ಪ್ರಶಸ್ತಿ – ಶ್ವೇತಾ ಜೈನ್ ಮೂಡುಬಿದಿರೆ, ಸಮುದಾಯದ ಹೆಮ್ಮೆಯ ಅಧಿಕಾರಿ – ಜಿನೇಂದ್ರ ಕಣಗಾವಿ ಐ ಪಿ ಎಸ್, ಉತ್ತಮ ಪುಸ್ತಕ ಸರಣಿ – ಜೈನ ಸಾಹಿತ್ಯ ಚರಿತ್ರೆ / ಲೇಖಕರು ಎಸ್ ಪಿ ಪದ್ಮಪ್ರಸಾದ್ ತುಮಕೂರು, ಜೈನ ಮಾಧ್ಯಮ ಪ್ರಶಸ್ತಿ – ಡಾ. ನೀರಜಾ ನಾಗೇಂದ್ರ ಜೈನ್ ಬೆಂಗಳೂರು, ಬೆಷ್ಟ್ ಬಿಜಿನೆಸ್ ಅವಾರ್ಡ್ – ನಿರಂಜನ್ ಜೈನ್ ಮುರುಡೇಶ್ವರ, ಬೆಷ್ಟ್ ಪ್ರಾಜೆಕ್ಟ್ – ಜೈನ ಗೆಜೆಟ್ / ನಿರ್ಮಾತೃ ಡಾ. ಅಜಿತ್ ಮುರುಗುಂಡೆ, ಸೇವಾರತ್ನ – ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಧರ್ಮಸ್ಥಳ, ಸಮ್ಮಿಲನ ಶ್ರೀ – ಡಾ. ಹಂಪಾ ನಾಗರಾಜಯ್ಯ ಬೆಂಗಳೂರು. ಇವರುಗಳಿಗೆ ಪ್ರಶಸ್ತಿಯನ್ನು ಕೊಡಮಾಡಲಾಯಿತು. ಹಾಗೆಯೇ ಜಿನಸಮ್ಮಿಲನ ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು , ದಾನಿಗಳನ್ನು, ಗಣ್ಯ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಡಾ. ಸ್ನೇಹಶ್ರೀ ನಿರ್ಮಲ್ ಕುಮಾರ್ ಅವರಿಂದ ಸಂಗೀತ ಕಾರ್ಯಕ್ರಮ, ಶ್ವೇತಾ ಜೈನ್ ಮೂಡುಬಿದಿರೆ ಅವರಿಂದ ರಸಪ್ರಶ್ನೆ ಕಾರ್ಯಕ್ರಮ, ಗ್ರೂಪ್ ಸಾಂಗ್, ಜೈನಿಸಂ ಫಾರ್ ಟ್ರೂತ್ , ಗೇಮಿಂಗ್ ಪ್ರೋಗ್ರಾಂ, ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮುಂತಾದ ಕಾರ್ಯಕ್ರಮಗಳು ನಡೆದು ಜನಮನರಂಜಿಸಿತು. ಸಮ್ಮಿಲನದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶವನ್ನು ಆನ್ಲೈನ್ ಮೂಲಕ ನಿರಂಜನ್ ಜೈನ್ ಕುದ್ಯಾಡಿ ಮತ್ತು ಮಹಾವೀರ್ ಪ್ರಸಾದ್ ಹೊರನಾಡು ಪ್ರಕಟಿಸಿದರು. ವೀಡಿಯೋಗಳ ಎಡಿಟಿಂಗ್ , ಗ್ರಾಫಿಕ್ಸ್ ನ್ನು ಶ್ವೇತಾ ನಿಹಾಲ್ ಜೈನ್, ಪ್ರಜ್ವಲ್ ಜೈನ್ ಚಾಮರಾಜನಗರ, ಪೂಜಾ ತುಮಕೂರು, ಅಕ್ಷಯ್ ಜೈನ್ ಕೆರ್ವಾಶೆ ಸಹಕರಿಸಿದರು.
ಶುಭಶ್ರೀ ಜೈನ್ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ದುಬೈನ ಮಕ್ಕಳು ದುಬೈ ರಾಷ್ಟ್ರಗೀತೆ ಮತ್ತು ಭಾರತದ ರಾಷ್ಟ್ರಗೀತೆ ಹಾಡಿದರು. ಕಾರ್ಯಕ್ರಮದ ಮುಖ್ಯ ರೂವಾರಿಗಳಾದ ಜೈನ್ ಮಿಲನ್ ದುಬೈ ಇದರ ಅಧ್ಯಕ್ಷ ಸಂದೇಶ್ ಜೈನ್ ಅಂಗಡಿಬೆಟ್ಟು ದುಬೈ ಸ್ವಾಗತಿಸಿದರು, ಹಾಗೂ ಸುಹಾಸ್ತಿ ಯುವ ಜೈನ್ ಮಿಲನ್ ನ ಮುಖಂಡ ಚಿತ್ತಾ ಜಿನೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಹಾಸ್ತಿ ಯುವ ಜೈನ್ ಮಿಲನ್ ಅಧ್ಯಕ್ಷ ಪುಟ್ಟಸ್ವಾಮಿ ಜೈನ್ ಕೆ ಡಿ ಮತ್ತು ಕಾರ್ಯಕ್ರಮದ ಮುಖ್ಯ ಸಂಯೋಜಕ ವಜ್ರಕುಮಾರ್ ಜೈನ್ ಧನ್ಯವಾದಗಳನ್ನು ಅರ್ಪಿಸಿದರು.
ಭಾರತದಿಂದ ಸುಮಾರು 250 ರಿಂದ 300 ಜನ ದುಬೈ ಜಿನಸಮ್ಮಿಲನದಲ್ಲಿ ಪಾಲ್ಗೊಂಡಿದ್ದರು. ದುಬೈನ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲಾಯಿತು. ದೇಶಿ ಸಾಂಪ್ರಾದಾಯಿಕ ಊಟೋಪಚಾರಗಳ ವ್ಯವಸ್ಥೆ ಮಾಡಲಾಗಿತ್ತು.
– ನಿರಂಜನ್ ಜೈನ್ ಕುದ್ಯಾಡಿ