ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದ ಕಾಂಗ್ರೆಸ್ನ ಹಿರಿಯ ನಾಯಕ ಸಿಎಂ ಇಬ್ರಾಹಿಂ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದು, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜಿನಾಮೆ ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ನಾನು ಸ್ವಾಭಿಮಾನದಿಂದ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ. ರಾಜೀನಾಮೆ ಪತ್ರವನ್ನು ಸಿದ್ದರಾಮಯ್ಯನವರಿಗೆ ಕಳಿಸುತ್ತೇನೆ. ರಾಜೀನಾಮೆ ಅಂಗೀಕಾರ ಮಾಡುವುದು ಅವರಿಗೆ ಸೇರಿದ್ದು. ನಾನು ನನ್ನ ಜವಾಬ್ದಾರಿಯಿಂದ ಮುಕ್ತನಾಗಿದ್ದೇನೆ. ನಾನು ಮುಂದೆ ಯಾವ ನಿರ್ಧಾರ ಬೇಕಿದ್ದರೂ ತೆಗೆದುಕೊಳ್ಳಬಹುದು. ನೀವೂ ಪಕ್ಷ ತೊರೆಯಬೇಡಿ ಅಂತಾ ಜನರನ್ನು ಕಳುಹಿಸಿದ್ದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ, ಸಿದ್ದರಾಮಾಯ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಕೆಲವರನ್ನ ಪಕ್ಷದಿಂದ ಅವರೇ ತಳ್ಳುತ್ತಿದ್ದಾರೆ. ನನ್ನನ್ನು ತಳ್ಳುವ ಮೊದಲೇ ಕಾಂಗ್ರೆಸ್ ಪಕ್ಷ ತೊರೆಯುತ್ತಿದ್ದೇನೆ. ನನ್ನ ಜೊತೆ ಅನೇಕರು ಬರುತ್ತಾರೆ. ಮುಂದೆ ದೇವೇಗೌಡ, ಕುಮಾರಣ್ಣ, ರೇವಣ್ಣರ ಜೊತೆ ಚರ್ಚೆ ಮಾಡಿ ನಿರ್ಣಯ ಪ್ರಕಟ ಮಾಡುತ್ತೇನೆ ಎಂದರು.
ಅಂತೆಯೇ ‘ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಗೌರವದಿಂದ ನಡೆಸಿಕೊಳ್ಳುತ್ತಿಲ್ಲ. ನಮ್ಮನ್ನು ಬಳಸಿಕೊಳ್ಳುತ್ತಿದೆ, ಆದರೆ ಅಧಿಕಾರ ಕೊಡುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯಲು, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ. 1995ನೇ ಇಸವಿಯಲ್ಲಿ ಆಗಿದ್ದ ಬೆಳವಣಿಗೆಯೇ ಈಗಲೂ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ನೆಲೆ ಕಳೆದುಕೊಳ್ಳುತ್ತಿದೆ ಎನ್ನುವುದನ್ನು ನಾನು ಹಲವು ದಿನಗಳಿಂದ ಹೇಳುತ್ತಲೇ ಇದ್ದೇನೆ. ಜನರ ಜೊತೆ ಸಂಪರ್ಕ ಇಲ್ಲದಿರುವವರನ್ನೇ ನಾಯಕರನ್ನಾಗಿ ಬೆಳೆಸುತ್ತಿದೆ.
ಅದರ ಪರಿಣಾಮ ಏನು ಎಂಬುದು ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ತಿಳಿಯುತ್ತದೆ. ಆದರೆ ಕರ್ನಾಟಕವನ್ನ ಉತ್ತರ ಪ್ರದೇಶ ಆಗಲು ನಾವು ಬಿಡುವುದಿಲ್ಲ. ಇದು ಬಸವಣ್ಣ, ಸರ್ವಜ್ಞ, ಕನಕದಾಸ, ಪುರಂದರದಾಸ, ರಾಘವೇಂದ್ರ ಸ್ವಾಮಿಗಳ ಪುಣ್ಯಸ್ಥಳ. ಹೀಗಾಗಿ ನಾನಿವತ್ತು ಕಾಂಗ್ರೆಸ್ ಪಕ್ಷ ತೊರೆದು ನನ್ನ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ.