ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವ ಹೊಂದಿರುವ ಪಕ್ಷವಾಗಿದೆ. ಆದ್ದರಿಂದ ನಾನು ಪಕ್ಷದ ಒಳಗಡೆಯೇ ಈ ಬಗ್ಗೆ ಪ್ರಶ್ನಿಸುತ್ತೇನೆ ಎಂಬ ಮಾತನ್ನು ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಎಂಬಿ ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಆಂತರಿಕ ಪ್ರಜಾಪ್ರಭುತ್ವದ ಪಕ್ಷ. ರಾಜಕೀಯದಲ್ಲಿ ಅಲಿಖಿತ ನೀತಿ ಸಂಹಿತೆ ಇದೆ. ಈ ಸಂಹಿತೆಯನ್ನು ಉಲ್ಲಂಘಿಸಲಾಗಿದೆ. ಇದರಿಂದಾಗಿ ರಮ್ಯಾ ಅವರು ಪಕ್ಷದ ಹಿತದೃಷ್ಟಿಯಿಂದ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ರಮ್ಯಾ ಅವರ ವಿರುದ್ಧ ಕೆಲವರು ಸರದಿಯಂತೆ ಮಾತನಾಡುತ್ತಿದ್ದಾರೆ ಎಲ್ಲದೇ ಅವರ ಮೇಲೆ ಟ್ರೋಲ್ ಮಾಡಲಾಗುತ್ತಿದೆ. ಇವರು ಕಾಂಗ್ರೆಸ್ನ ಮಾಜಿ ಸಂಸದೆ ಮತ್ತು ಪಕ್ಷಕ್ಕಾಗಿ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೇ ಚರ್ಚೆಯನ್ನು ಅಂತ್ಯಗೊಳಿಸುವಂತೆ ಎಲ್ಲರಿಗೂ ಸೂಚಿಸಿದ್ದರು. ಇದನ್ನು ಮುಂದುವರಿಸುವುದು 2023ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಾನಿಕಾರಕವಾಗಿದೆ. ಇದನ್ನು ಇಲ್ಲಿಗೆ ಕೊನೆಗೊಳಿಸಬೇಕೆಂದು ನಾನು ಪಕ್ಷದ ಎಲ್ಲರಿಗೂ ಕೋರುತ್ತೇನೆ. ದೊಡ್ಡ ಗುರಿಯತ್ತ ಗಮನಹರಿಸೋಣ, ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಅಶ್ವತ್ ನಾರಾಯಣ್ ಅವರು ಎಂಬಿ ಪಾಟೀಲರನ್ನು ಭೇಟಿಯಾಗಿ ತಮ್ಮ ವಿರುದ್ಧ ಮಾತಾಡದಂತೆ ಹೇಳಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಬೆನ್ನಲ್ಲೇ ಅವರ ಮೇಲೆ ಕಾಂಗ್ರೆಸ್ನ ಕೆಲವರು ಮುಗಿಬಿದ್ದಿದ್ದರು. ನಟಿ ರಮ್ಯಾ ಅವರು ಅದನ್ನು ನೇರವಾಗಿ ಎದುರಿಸಿದ್ದಲ್ಲದೇ, ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದರು.