ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದಕ್ಕೆ ಡಿಬಾರ್ ಆದ ಬಿಕಾಂ ವಿದ್ಯಾರ್ಥಿನಿ ಲೇಡಿಸ್ ಪಿಜಿ ಕಟ್ಟಡದ 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮರಜ್ಯೋತಿನಗರದ ನ್ಯೂ ಎಸ್ ಎನ್ ಎಸ್ ಲಕ್ಸುರಿ ಪಿಜಿಯಲ್ಲಿ ನಡೆದಿದೆ.
ಕೋರಮಂಗಲದ ಜ್ಯೋತಿನಿವಾಸ್ನಲ್ಲಿ ಬಿಕಾಂ ಓದುತ್ತಿದ್ದ 19 ವರ್ಷದ ಭವ್ಯ, ಪರೀಕ್ಷೆಯಲ್ಲಿ ಕಾಪಿ ಮಾಡಿದ್ದಾಳೆ ಎಂದು ಕಾಲೇಜಿನಲ್ಲಿ ಡಿಬಾರ್ ಮಾಡಲಾಗಿತ್ತು. ನನ್ನನ್ನು ಡಿಬಾರ್ ಮಾಡಿದ್ದಾರೆ. ನಾನು ಬದುಕಲ್ಲ, ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಕಟ್ಟಡದಿಂದ ಹಾರುವ ಮುನ್ನ ಸಹೋದರಿ ದಿವ್ಯಾಗೆ ಫೋನ್ ಮಾಡಿ ಹೇಳಿಕೊಂಡಿದ್ದಾಳೆ.
ಭವ್ಯಾ ಕರೆ ಮಾಡಿದ್ದನ್ನು ದಿವ್ಯಾ ತನ್ನ ತಂದೆಗೆ ತಿಳಿಸಿದ್ದಾಳೆ, ಮುಳುಬಾಗಿಲಿನಿಂದ ಭವ್ಯ ತಂದೆ ಕೂಡಲೇ ಪಿಜಿ ಬಳಿ ಬಂದಿದ್ದಾರೆ. ಸ್ಥಳಕ್ಕೆ ಬರುವ ವೇಳೆಗೆ ಪೊಲೀಸರಿಂದ ಕರೆ ಬಂದಿದೆ. ಸದ್ಯ ಈ ಬಗ್ಗೆ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕಾಲೇಜಿನಲ್ಲಿ ನಡೆದ ಘಟನೆಯಿಂದ ಮಾನಸಿಕವಾಗಿ ನೊಂದಿದ್ದರು, ಇದರಿಂದಲೇ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ.