ಕರಾವಳಿ ಭಾಗದಲ್ಲಿ ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಗೆ ನಿರ್ಬಂಧಿಸಿರುವ ಪ್ರಕರಣಗಳು ನಡೆದಿವೆ. ಇದೀಗ, ಈ ಬಿಸಿ ಕಾಫಿನಾಡು ಕೊಡಗಿಗೂ ವಿಸ್ತರಿಸಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮನೆಹಳ್ಳಿ ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನ ನಡೆಯುತ್ತಿತ್ತು. ಈ ಸಮ್ಮೇಳನದಲ್ಲಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಹಾಕಿದ್ದರು. ಭಜರಂಗದಳದ ಯುವಕರು ಮುಸ್ಲಿಂ ಸಮುದಾಯದವರ ಅಂಗಡಿಗಳನ್ನು ಖಾಲಿ ಮಾಡಿಸಿದ ಘಟನೆ ನಡೆದಿದೆ.
ಭಜರಂಗದಳದ ಕಾರ್ಯಕರ್ತರು, ಸಮ್ಮೇಳನದಲ್ಲಿ ವ್ಯಾಪಾರಕ್ಕೆ ಬಂದಿದ್ದ ಮುಸ್ಮಿಮರ ಮಕ್ಕಳ ಆಟಿಕೆ, ಕಬ್ಬಿನ ಹಾಲು ಮತ್ತು ತಿಂಡಿ ತಿನಿಸುಗಳ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿದ್ರು. ಅಲ್ಲದೇ ಗೋವುಗಳ ಕಡಿದು ತಿನ್ನುವ ಅವರು ಗೋ ಸಮ್ಮೇಳನಕ್ಕೆ ಯಾಕೆ ಬರಬೇಕು. ಗೋವುಗಳ ಕಡಿದು ತಿನ್ನುವವರಿಗೆ ಇಲ್ಲಿ ವ್ಯಾಪಾರ ಮಾಡಲು ಅನುಮತಿ ಇಲ್ಲ ಎಂದು ಹೇಳಿದ್ದಾರೆ.
ಇದೇ ಸಂದರ್ಭ ಭಜರಂಗದಳದ ಸೋಮವಾರಪೇಟೆ ತಾಲೂಕು ಸಂಚಾಲಕ ಜೀವನ್ ಮಾತಾನಾಡಿದ್ದು, ಹಿಂದೂಗಳು ಜಾತ್ರೆ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ಮುಸ್ಲಿಮರು ಪಾಲ್ಗೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇವರು ನಡೆಸುವ ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಳ್ಳಲಿ. ಆದ್ರೆ ನಮ್ಮ ಕಾರ್ಯಕ್ರಮಗಳಲ್ಲಿ ಅವರು ಬರುವುದು ಬೇಡ. ಇದು ಅವರಿಗೆ ಎಚ್ಚರಿಕೆ ಗಂಟೆ ಎಂದು ಹೇಳಿದ್ದಾರೆ.