ಕೊರೋನಾ ಲಸಿಕಾಕರಣದಲ್ಲಿ ವಿಜಯಪುರ ಜಿಲ್ಲೆಯು ಮೊದಲ ಮತ್ತು ಎರಡನೇ ಡೋಲ್ ಲಸಿಕೆ ನೀಡಿಕೆಯಲ್ಲಿ ಶೇ 100 ರಷ್ಟು ಗುರಿ ತಲುಪಿದ ರಾಜ್ಯದ ಎರಡನೇ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ವಿಜಯಪುರ ಜಿಲ್ಲಾ ಆರೋಗ್ಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 16.34 ಲಕ್ಷ ಜನರಿಗೆ ಕೊರೋನಾ ಲಸಿಕೆ ಹಾಕುವ ಗುರಿ ನಿಗದಿಯಾಗಿತ್ತು. ಇದರಲ್ಲಿ ಈಗಾಗಲೇ ಮೊದಲನೇ ಡೋಸ್ ಲಸಿಕೆಯನ್ನು 17,57,438 ಫಲಾನುಭವಿಗಳಿಗೆ ಅಂದರೆ, ಶೇ 105 ರಷ್ಟು ಜನರಿಗೆ ನೀಡಲಾಗಿದೆ. ಎರಡನೇ ಡೋಸ್ ಲಸಿಕೆಯನ್ನು 16.34 ಲಕ್ಷ ಫಲಾನುಭವಿಗಳಿಗೆ ನೀಡುವ ಮೂಲಕ ಶೇ 100 ಲಸಿಕಾಕರಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈವರೆಗೂ ಬೆಂಗಳೂರು ಗ್ರಾಮಾಂತರವು ರಾಜ್ಯದಲ್ಲಿ ಶೇಕಡಾ 100 ರಷ್ಟು ಲಸಿಕೆಯನ್ನು ಸಾಧಿಸಿದ ಏಕೈಕ ಜಿಲ್ಲೆಯಾಗಿತ್ತು. ಇದೀಗ ವಿಜಯಪುರ ಜಿಲ್ಲೆಯು ಆ ಸಾಲಿಗೆ ಸೇರಿದೆ. ಇನ್ನು, 12 ಕ್ಕೂ ಹೆಚ್ಚು ಜಿಲ್ಲೆಗಳು ಶೇ. 90ರಷ್ಟು ಅರ್ಹ ಜನರಿಗೆ ಎರಡೂ ಡೋಸ್ ಲಸಿಕೆಗಳನ್ನು ನೀಡಿದೆ. ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ರಾಜ್ಯದ ದರವು ಶೇ.101ರಷ್ಟಿದ್ದರೆ, ಎರಡನೇ ಡೋಸ್ ಶೇ.88 ರಷ್ಟಿದೆ.
ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಇತರ ಇಲಾಖೆಗಳ ಸಿಬ್ಬಂದಿಗಳ ಪ್ರಯತ್ನದಿಂದ ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ಅರ್ಹರಿಗೆ ಎರಡು ಡೋಸ್ ಲಸಿಕೆ ಹಾಕುವ ಗುರಿಯನ್ನು ಸಾಧಿಸಿದೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.