ಸಿನಿಮಾ ನಿರ್ದೇಶಕ, ನಿರ್ಮಾಪಕ, ನಟ ಎಸ್. ನಾರಾಯಣ್ ಮತ್ತು ರಾಜ್ಯ ಪಿಯು ಉಪನ್ಯಾಸಕರ ಸಂಘದ ನಿಕಟಪೂರ್ವ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಇಂದು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಇಬ್ಬರಿಗೂ ಕಾಂಗ್ರೆಸ್ ಧ್ವಜ ನೀಡಿ ಶಿವಕುಮಾರ್ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬಹುಮುಖ ಪ್ರತಿಭೆ, ಸರಳ ವ್ಯಕ್ತಿತ್ವದ ನಾರಾಯಣ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪಕ್ಷದ ತತ್ವ, ಸಿದ್ಧಾಂತ ಒಪ್ಪಿ ಅವರು ಪಕ್ಷ ಸೇರಿದ್ದಾರೆಎಂದರು.
ಮುಂದಿನ ದಿನಗಳಲ್ಲಿ ಅವರು ಸಿನಿಮಾ ಕ್ಷೇತ್ರ ಮತ್ತು ತಮ್ಮ ಸಮುದಾಯದ ಸಂಘಟನೆ ಮಾಡಲಿದ್ದಾರೆ. ಕಾಂಗ್ರೆಸ್ ಸೇರುವವರ ದೊಡ್ಡ ಪಟ್ಟಿಯೇ ನನ್ನಲ್ಲಿದೆ. ಅವರೆಲ್ಲರ ಸೇರ್ಪಡೆಗೆ ದಿನ ನಿಗದಿಪಡಿಸಬೇಕಿದೆ ಎಂದರು.
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಮುಗಿದೇ ಹೋಯಿತು, ದೂಳೀಪಟ ಎಂದೆಲ್ಲ ಸುದ್ದಿಯಾಗಿದೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ 200 ಕ್ಕೂ ಹೆಚ್ಚು ಸಭೆ ಮಾಡಿದ್ದಾರೆ. ಇದು ಮುಂದಿನ ದಿನ ಹೆಜ್ಜೆಗೆ ನಮಗೆ ಅನುಕೂಲ. ಯಡಿಯೂರಪ್ಪ, ಮುಖ್ಯಮಂತ್ರಿ ಏನೇ ಮಾತಾಡಲಿ. ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ನಮ್ಮ ಕಾಲ ಮೇಲೆ ನಾವು ನಿಲ್ಲಲಿದ್ದೇವೆ ಎಂದೂ ಶಿವಕುಮಾರ್ ಹೇಳಿದರು.
ಎಸ್. ನಾರಾಯಣ್ ಮಾತನಾಡಿ, ಮೂರು ದಶಕಗಳಿಂದ ನಟ, ನಿರ್ಮಾಪಕ, ನಿರ್ದೇಶಕನಾಗಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಕನ್ನಡ ಚಿತ್ರರಂಗದ ನನಗೆ ನಿರೀಕ್ಷೆ ಮೀರಿದ ಅವಕಾಶ ಕೊಟ್ಟಿದೆ. ನಾನು ರಾಜಕೀಯ ರಂಗಕ್ಕೆ ಏಕೆ ಬಂದೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಈ ಭಾರತ ಮಣ್ಣಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಋಣಿ ಆಗಿರಬೇಕು ಎಂದರು.
ಬ್ರಿಟಿಷ್ನವರು ದೇಶ ದೋಚಿ ಹೋದಾಗ, ಅನ್ನ, ನೀರು ಧೈರ್ಯ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಈ ಪಕ್ಷ ಹಿಂದುಳಿದ ವರ್ಗಗಳ ಧ್ವನಿಯಾಗಿದೆ. ಪಕ್ಷದ ಜಾತ್ಯಾತೀತ ಸಿದ್ದಾಂತ ನನಗೆ ಇಷ್ಟ. ನಾನು ವಿದ್ಯಾರ್ಥಿಯಾಗಿ ಕಾಂಗ್ರೆಸ್ಗೆ ಸೇರಿದ್ದೇನೆ. ಕಾಂಗ್ರೆಸ್ ಸೇರ್ಪಡೆ ನನಗೆ ಹೊಸ ಹುರುಪು ತಂದಿದೆ. ಪಕ್ಷಕ್ಕೆ ಹಗಲು ರಾತ್ರಿ ಕೆಲಸ ಮಾಡಲು ಸಿದ್ಧ. 2023ರ ಸಾರ್ವತ್ರಿಕ ಚುನಾವಣೆಗೆ ಪಕ್ಷ ಅಧಿಕಾರಕ್ಕೆ ಬರಬೇಕು. 2023ರ ಚುನಾವಣೆ- ಕಾಂಗ್ರೆಸ್ ಕರ್ನಾಟಕ ಎಂಬ ಸ್ಲೋಗನ್ನಲ್ಲಿ ಕೆಲಸ ಮಾಡೋಣ’ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.
ಅನಂತರ ಮಾತನಾಡಿದ ತಿಮ್ಮಯ್ಯ ಪುರ್ಲೆಯವರು, ನಾನು ಜನತಾದಳದ ವಿಭಾಗ ಮಟ್ಟದ ವೀಕ್ಷಕನಾಗಿ ಹಳ್ಳಿ ಹಳ್ಳಿಯಲ್ಲಿ ಓಡಾಡಿದ್ದೇನೆ. ನನ್ನ ಪ್ರಕಾರ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಹೊರತುಪಡಿಸಿದರೆ ಇನ್ಯಾವುದೇ ಪಕ್ಷ ಇಲ್ಲ. ಶಿವಕುಮಾರ್ ಅವರು ಪಕ್ಷದ ಮುಂದಾಳತ್ವ ವಹಿಸಿದ ಮೇಲೆ ಪಕ್ಷ ಬಹಳ ಪ್ರಬಲವಾಗಿ ಮುನ್ನಡೆಯುತ್ತಿದೆ.
ನನ್ನಂತಹ ಪ್ರಗತಿಪರರು ಮುಂದಿಮ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಆಶಾಭಾವನೆ ಹೊಂದಿದ್ದೇನೆ. ಈಗ ನೂತನ ಶಿಕ್ಷಣ ನೀತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹಿಂದುಳಿದ ವರ್ಗದವರಿಗೆ ಮಾರಕವಾಗಿದ್ದು, ಬೇರೆಯವರು ಹೊರತಾಗಿ ಉಳಿದವರು ಓದಬಾರದು ಎಂಬ ಹುನ್ನಾರ ನಡೆಯುತ್ತಿದೆ. ಪಕ್ಷದಲ್ಲಿ ಸಣ್ಣ ಕೆಲಸ ಕೊಟ್ಟರು ಬಹಳ ಜವಾಬ್ದಾರಿ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.