ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರ ಸೋದರಳಿಯ ‘ಮುಬಾಶಿರ್ ಆಜಾದ್’ ಅವರು ಭಾನುವಾರ ಜಮ್ಮು ಮತ್ತು ಕಾಶ್ಮೀರ ತ್ರಿಕೂಟ ನಗರದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. “ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಮುಬಾಶಿರ್ ಅಜಾದ್ ಹೇಳಿದ್ದಾರೆ.
ಗುಲಾಂ ನಬಿ ಆಜಾದ್ ಅವರ ಕಿರಿಯ ಸಹೋದರ ಲಿಯಾಕತ್ ಅಲಿ ಅವರ ಪುತ್ರ, ಮುಬಾಶಿರ್ ಆಜಾದ್ ಕೂಡ ತಮ್ಮ ಚಿಕ್ಕಪ್ಪನಿಗೆ ಕಾಂಗ್ರೆಸ್ ನಾಯಕತ್ವದಿಂದ “ಅಗೌರವ” ಉಂಟಾಗಿದೆ ಎಂದು ಆರೋಪಿಸಿದರು. ಅದು ನನಗೆ ನೋವುಂಟು ಮಾಡಿದ್ದು, ದೊಡ್ಡ ಹಾಗೂ ಹಳೆಯ ಪಕ್ಷದಿಂದ ಹೊರಬರಲು ಕಾರಣವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ತಾವು ಬಿಜೆಪಿ ಸೇರುವ ಬಗ್ಗೆ ಚಿಕ್ಕಪ್ಪನ ಜತೆ ಚರ್ಚಿಸಿಲ್ಲ ಎಂದು ಹೇಳಿದ್ದಾರೆ..
ಮುಬಾಶಿರ್ ಆಜಾದ್ ಮತ್ತು ಅವರ ಬೆಂಬಲಿಗರನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ಮತ್ತು ಮಾಜಿ ಶಾಸಕ ದಲೀಪ್ ಸಿಂಗ್ ಪರಿಹಾರ್ ಸೇರಿದಂತೆ ಇತರ ಹಿರಿಯ ನಾಯಕರು ಪಕ್ಷಕ್ಕೆ ಸ್ವಾಗತಿಸಿದರು. ಮುಬಾಶಿರ್ ಅಜಾದ್ ಬಿಜೆಪಿ ಸೇರಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿಗೆ ದೊಡ್ಡ ತಿರುವು ಸಿಕ್ಕಂತಾಗಿದೆ. ಇದು ಚೆನಾಬ್ ಕಣಿವೆ ಪ್ರದೇಶದ ದೋಡಾ, ಕಿಶ್ತ್ವಾರ್ ಮತ್ತು ರಾಂಬನ್ ಜಿಲ್ಲೆಗಳಿಂದ ಹೆಚ್ಚಿನ ಯುವ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಲು ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.
ಏಪ್ರಿಲ್ 2009 ರಲ್ಲಿ, ಆಜಾದ್ ಅವರ ಸಹೋದರ ಗುಲಾಂ ಅಲಿ ಕೂಡ ಬಿಜೆಪಿ ಸೇರಿದ್ದರು.
ಮುಬಾಶಿರ್ ಅಜಾದ್ ಮಮಾತನಾಡಿ,ಕಾಂಗ್ರೆಸ್ ಪಕ್ಷವು ಒಳಜಗಳದಲ್ಲಿ ಮುಳುಗಿದೆ. ಆದರೆ, ಬಿಜೆಪಿಯಲ್ಲಿ ಮೋದಿ ನೇತೃತ್ವದಲ್ಲಿ ಜನರ ಕಲ್ಯಾಣಕ್ಕಾಗಿ ಕೆಲಸ ನಡೆಯುತ್ತಿದೆ. ಪಕ್ಷದ ವರ್ಚಸ್ವಿ ನಾಯಕರಲ್ಲಿ ಒಬ್ಬರಾದ ಮತ್ತು ಮಾಜಿ ಮುಖ್ಯಮಂತ್ರಿ (ಗುಲಾಂ ನಬಿ) ಆಜಾದ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಸಾಮಾನ್ಯ ಜನಸಾಮಾನ್ಯರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಹೇಳಿದ್ದಾರೆ.
“ದೇಶಕ್ಕಾಗಿ ಅವರು ಮಾಡಿದ ಸೇವೆಗಾಗಿ ಅವರು ಪ್ರಧಾನಿಯಿಂದ ಪ್ರಶಂಸಿಸಲ್ಪಟ್ಟರು. ಆದರೆ ಪಕ್ಷದಿಂದ ಅವರನ್ನು ಬದಿಗಿಟ್ಟರು” ಎಂದು ಮುಬಾಶಿರ್ ಕಾಂಗ್ರೆಸ್ ಬಗೆಗಿನ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿದ್ದ ಗುಲಾಂ ನಬಿ ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದರು. ಇವರು ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿ-23 ರ ಭಾಗವಾಗಿದ್ದರು. ಈ ಗುಂಪು 2020 ರ ಆಗಸ್ಟ್‌ನಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಬದಲಾವಣೆಯಗಳ ಬಗಗ್ಗೆ ಕೂಲಂಕುಷವಾಗಿ ಯೋಚಿಸುವಂತೆ ಪತ್ರ ಬರೆದಿದ್ದರು.