2014 ರ ಚುನಾವಣಾ ಪ್ರಮಾಣಪತ್ರದಲ್ಲಿ ಮಾಹಿತಿಯನ್ನು ಮರೆಮಾಚಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಸಚಿವ ಬಚ್ಚು ಕಡುಗೆ 2 ತಿಂಗಳ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.
ಜೈಲು ಶಿಕ್ಷೆಗೊಳಗಾದ ಸಚಿವ ಪ್ರಹರ್ ಜನಶಕ್ತಿ ಪಕ್ಷದ ಸದಸ್ಯನಾಗಿದ್ದು, ಶಿಕ್ಷೆಯ ಪ್ರಮಾಣ ಪ್ರಕಟಗೊಂಡ ಬಳಿಕ ಜಾಮೀನು ಪಡೆದಿದ್ದಾನೆ. ಸಿವಿಲ್ ನ್ಯಾಯಾಧೀಶರಾದ ಎಲ್ ಸಿ ವಾಡೇಕರ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಶಿಕ್ಷೆಗೊಳಗಾದ ರಾಜಕಾರಣಿ ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದಾರೆ. ಇವರ ವಿರುದ್ಧ ಜನಪ್ರತಿನಿಧಿಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಜೈಲು ಶಿಕ್ಷೆಯ ಹೊರತಾಗಿ ಕೋರ್ಟ್ ಸಚಿವರಿಗೆ 25,000 ರೂಪಾಯಿ ದಂಡ ವಿಧಿಸಿತ್ತು. ಸಚಿವ ಬಚ್ಚು ಕಡುಗೆ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ನೀಡಿರುವ ನ್ಯಾಯಾಲಯ, ತನ್ನ ಆದೇಶವನ್ನು 30 ದಿನಗಳವರೆಗೆ ಅಮಾನತಿನಲ್ಲಿಟ್ಟಿದೆ.
2014 ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಕಡು ಮುಂಬೈ ನಲ್ಲಿರುವ 43.46 ಲಕ್ಷ ರೂಪಾಯಿ ಮೌಲ್ಯದ ಫ್ಲಾಟ್ ಕುರಿತ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ಬಹಿರಂಗಪಡಿಸದೇ ಮುಚ್ಚಿಟ್ಟಿದ್ದರು ಎಂದು ಬಿಜೆಪಿ ನಾಯಕ ಗೋಪಾಲ್ ತಿರ್ಮಾರೆ ದೂರು ನೀಡಿದ್ದರು.