ವ್ಯಕ್ತಿಯೊಬ್ಬ ಐದು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಯನ್ನು ಬೆಂಕಿ ಹಚ್ಚಿ ಕೊಂದು ಹಾಕಿರುವ ಘಟನೆ ಬೆಂಗಳೂರಿನಲ್ಲಿ ಇಂದು ಶುಕ್ರವಾರ ನಡೆದಿದೆ. ಮೃತರನ್ನು 23 ವರ್ಷದ ದಾನೇಶ್ವರಿ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಸಹೋದರಿ ತೇಜಸ್ವಿನಿ, ಶಿವಕುಮಾರ್ ಚಂದ್ರಶೇಖರ ಹಿರೇಹಾಳ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಶಿವಕುಮಾರ್ ಮತ್ತು ಸಂತ್ರಸ್ತೆ ವಿಜಯಪುರ ಜಿಲ್ಲೆಯ ಒಂದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕೋರ್ಸ್ ಓದುತ್ತಿದ್ದರು. ಬಳಿಕ ಪರಿಚಯ ಏರ್ಪಟ್ಟು ಪ್ರೀತಿಸುತ್ತಿದ್ದರು. 2018 ರಲ್ಲಿ ಬಿಜಾಪುರದ ಕಾಲೇಜಿನಲ್ಲಿ ಓದುವಾಗ ಇಬ್ಬರು ಪರಿಚಯವಾಗಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವೀರಸಂದ್ರ ಗೇಟ್ ಬಳಿ ಇರುವ ಕಂಪನಿಯಲ್ಲಿ ಶಿವಕುಮಾರ್ಗೆ ಕೆಲಸ ಸಿಕ್ಕಿತ್ತು. ಪ್ರೀತಿಸುವ ವೇಳೆ ಕೆಲಸಕ್ಕೆ ಸೇರಿ ಸೆಟ್ಲಾದ ಬಳಿಕ ಮದುವೆಯಾಗ್ತೀನಿ ಎಂದು ಶಿವಕುಮಾರ್ ಹೇಳಿದ್ದ, ಆತ ಬೆಂಗಳೂರಿಗೆ ಬಂದಾಗ ದಾನೇಶ್ವರಿಯನ್ನು ಕೂಡ ಪುಸಾಯಿಸಿ ಬೆಂಗಳೂರಿಗೆ ಕರೆಸಿಕೊಂಡಿದ್ದ. ಮನೆಯಲ್ಲಿ ಇಷ್ಟವಿಲ್ಲದಿದ್ದರೂ ಪ್ರೇಮಿಯನ್ನೇ ನಂಬಿ ದಾನೇಶ್ವರಿ ಕೂಡ ಬೆಂಗಳೂರಿಗೆ ಬಂದಿದ್ದರು. ಬಳಿಕ ಸುಮಾರು ಐದು ವರ್ಷಗಳ ಕಾಲ ಇಬ್ಬರೂ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದರು. ಆದರೆ ದಾನೇಶ್ವರಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು. ಕಾರಣಗಳನ್ನು ನೀಡಿ ಆತ ಮದುವೆ ನಿರಾಕರಿಸುತ್ತಿದ್ದ.
ಇದರಿಂದ ದಾನೇಶ್ವರಿಗೆ ದಿಕ್ಕು ತೋಚದಂತಾಗಿತ್ತು. ಹೆತ್ತವರ ವಿರೋಧದ ನಡುವೆ ಪ್ರೀತಿಸಿದ ಹುಡುಗ ಕೈ ಕೊಟ್ಟರೆ ಜೀವನ ಬೀದಿ ಪಾಲಾಗುತ್ತದೆ ಎಂಬ ಆತಂಕ ಆಕೆಯಲ್ಲಿ ಮನೆ ಮಾಡಿತ್ತು. ತನ್ನನ್ನು ಮದುವೆಯಾಗುವಂತೆ ಶಿವಕುಮಾರ್ ನನ್ನು ಪೀಡಿಸಿತೊಡಗಿದಳು. ಇದಕ್ಕೆ ಶಿವಕುಮಾರ್ ಜಾತಿ ನೆಪವೊಡ್ಡಿ ನಿರಾಕರಿಸುತ್ತಿದ್ದ. ಯುವತಿ ದಲಿತ ಸಮುದಾಯದವಳಾಗಿದ್ದು, ಯುವಕ ಲಿಂಗಾಯತ ಎಂದು ತಿಳಿದು ಬಂದಿದೆ. ಎರಡು ದಿನದ ಹಿಂದೆ ತನ್ನ ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು ಶಿವಕುಮಾರ್ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಆರೋಪಿ ಶಿವಕುಮಾರ್ ಪರಾರಿಯಾಗಿದ್ದ. ಮಾರ್ಚ್ 15 ರಂದು ಸಂತ್ರಸ್ತೆ ಗಾಯಗೊಂಡು ಸಾವನ್ನಪ್ಪಿದ್ದಾಳೆ.
ಇನ್ನೊಂದು ಮೂಲದ ಪ್ರಕಾರ ಯುವಕ ಮದುವೆಗೆ ಒಪ್ಪದೇ ಇದ್ದುದರಿಂದ, ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಶಿವಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.