ದೇಶದ 15ನೇ ರಾಷ್ಟ್ರಪತಿ ಆಯ್ಕೆಯ ಚುನಾವಣೆ ಇದೇ ಜುಲೈ 15 ರಂದು ನಡೆಯಲಿದೆ. ಮುಂದಿನ ಭಾರತದ ರಾಷ್ಟ್ರಪತಿಯಾಗಿ ಯಾವ ಪಕ್ಷದ ಅಭ್ಯರ್ಥಿ ನೇಮಕ ಆಗಬಹುದು ಎಂಬುದರ ಒಂದು ವಿಶ್ಲೇಷಣೆಯ ಜೊತೆಗೆ ಎನ್ಡಿಎ ಮತ್ತು ಯುಪಿಎ ಮತ್ತು ಇತರೆ ಪಕ್ಷಗಳ ಬಲಾಬಲದ ಬಗ್ಗೆ ಚರ್ಚೆ ಮಾಡೋಣ.
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತ. ಜೊತೆಗೆ ಎನ್ಡಿಎ ವಿರೋಧಿ ಬಣ ಕೂಡಾ ತನ್ನ ಅಭ್ಯರ್ಥಿಯನ್ನು ಹಾಕಬಹುದು. ಹಾಗಾದರೆ ಎನ್ಡಿಎ ಮತ್ತು ಎನ್ಡಿಎ ವಿರೋಧಿ ಬಣ ಮತ್ತು ಯಾವ ಬಣಕ್ಕೂ ಸೇರದ ಬಿಜೆಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಬಳಿ ಎಷ್ಟು ಮತ ಮೌಲ್ಯಗಳಿವೆ ಎಂಬ ಲೆಕ್ಕಾಚಾರ ಇಲ್ಲಿದೆ.
2017ರಲ್ಲಿ ನಡೆದಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರನ್ನು 3 ಲಕ್ಷದ 34 ಸಾವಿರ ಮೌಲ್ಯದ ಮತಗಳಿಂದ ಸೋಲಿಸಿದ್ದರು. ರಾಮನಾಥ್ ಕೋವಿಂದ್ ಅವರು ಪಡೆದಿದ್ದ ಮತಗಳ ಮೌಲ್ಯ 7,02,044.
ಖಾಲಿ ಇರುವ 13 ರಾಜ್ಯಸಭಾ ಮತ್ತು ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆಯಾದರೂ ಅದೂ ರಾಷ್ಟ್ರಪತಿ ಚುನಾವಣಾ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವುದು ಅನುಮಾನ.
ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆ ಆಗಲಿರುವ ಮತಗಳ ಒಟ್ಟು ಮೌಲ್ಯ: 10,86,431. ಗೆಲ್ಲಲು ಅಗತ್ಯ ಇರುವ ಮತ ಮೌಲ್ಯ: 5,43,216
ಲೋಕಸಭೆ ಮತ್ತು ರಾಜ್ಯಸಭೆಯ ಒಬ್ಬ ಸಂಸದರ ಮತ ಮೌಲ್ಯ: 700.
ಎನ್ಡಿಎ ಒಟ್ಟು ಸಂಸದರು: 448. ಅಂದರೆ ಎನ್ಡಿಎ ಸಂಸದರ ಮತ ಮೌಲ್ಯ: 3,13,600. ಇದರಲ್ಲಿ ಬಿಜೆಪಿಯೇ 392 ಸಂಸದರನ್ನು ಹೊಂದಿದ್ದು ಬಿಜೆಪಿ ಸಂಸದರ ಮತ ಮೌಲ್ಯವೇ 2,74,440 ಇದೆ.
ಇನ್ನು ರಾಜ್ಯಗಳ ವಿಧಾನಸಭೆಯಲ್ಲಿರುವ ಬಿಜೆಪಿ ನೇತೃತ್ವದ ಎನ್ಡಿಎ ಶಾಸಕರ ಒಟ್ಟು ಮತ ಮೌಲ್ಯ: 2,22,721
ಅಂದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಬಳಿ ಇರುವ ಒಟ್ಟು ಮತ ಮೌಲ್ಯ: 5,36,361 ಆಗ ಎನ್ಡಿಎ ಅಭ್ಯರ್ಥಿಗೆ ಆಗಬಹುದಾದ ಕೊರತೆ: 5,855 ಮತ ಮೌಲ್ಯಗಳಷ್ಟೇ.
ಎನ್ಡಿಎ ವಿರೋಧಿ ಬಣ (ಯುಪಿಎ ಮತ್ತು ಇತ್ತೀಚೆಗೆ ರೂಪುಗೊಳ್ಳುತ್ತಿರುವ ತೃತೀಯ ರಂಗ ಸೇರಿದಂತೆ)
ಎನ್ಡಿಎ ವಿರೋಧಿ ಬಣದಲ್ಲಿರುವ ಒಟ್ಟು ಸಂಸದರು: 243. ಅಂದರೆ ಅವರ ಒಟ್ಟು ಮತ ಮೌಲ್ಯ: 1,70,100
ರಾಜ್ಯಗಳ ವಿಧಾನಸಭೆಯಲ್ಲಿರುವ ಎನ್ಡಿಎ ವಿರೋಧಿ ಬಣದ ಶಾಸಕರ ಒಟ್ಟು ಮತ ಮೌಲ್ಯ: 2,77,643
ಅಂದರೆ ಎನ್ಡಿಎ ವಿರೋಧಿ ಬಣದಲ್ಲಿರುವ ಒಟ್ಟು ಮತ ಮೌಲ್ಯ – 4,47,743
ಇನ್ನೂ ಯಾವುದೇ ಬಣಕ್ಕೆ ಸೇರದ ಎರಡು ಪಕ್ಷಗಳು ಎಂದರೆ ಅದು ಆಂಧ್ರಪ್ರದೇಶದ ವೈಎಸ್ಆರ್ ಕಾಂಗ್ರೆಸ್ ಮತ್ತು ಒಡಿಶಾದ ಬಿಜೆಡಿ.
ಬಿಜೆಡಿ+ವೈಎಸ್ಆರ್ ಕಾಂಗ್ರೆಸ್ ಸಂಸದರು: 52. ಇವರ ಒಟ್ಟು ಮತ ಮೌಲ್ಯ: 36,400. ಈ ಎರಡೂ ಪಕ್ಷದ ಶಾಸಕರ ಮತ ಮೌಲ್ಯ: 40,836. ಅಂದರೆ ಈ ಎರಡೂ ಪಕ್ಷಗಳ ಬಳಿ ರಾಷ್ಟ್ರಪತಿ ಚುನಾವಣೆಗೆ ಇರುವ ಮತ ಮೌಲ್ಯ: 75,136