ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಂಗಳೂರು ನಗರದ 8ನೇ ಎಂಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಚೇತನ್ರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದ್ದಾರೆ.
ಫೇಸ್ಬುಕ್ ಮೂಲಕ ನ್ಯಾಯಮೂರ್ತಿಗಳ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ಹಿನ್ನೆಲೆಯಲ್ಲಿ ನಟ ಚೇತನ್ರನ್ನು ಮಂಗಳವಾರದಂದು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಐಪಿಸಿ ಸೆಕ್ಷನ್ 505(2) (ಸಾರ್ವಜನಿಕರ ಕೆಡುಕಿಗೆ ಕಾರಣವಾಗುವ ಹೇಳಿಕೆಗಳು) ಮತ್ತು 504 (ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಲು ಉದ್ರೇಕಿಸುವ ಉದ್ದೇಶದಿಂದ ಮಾಡುವ ಅಪಮಾನ) ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ಮೇಲೆ ಸೊಮೋಟೊ ಕೇಸ್ ದಾಖಲಿಸಿ ಬಂಧಿಸಿದ್ದರು.
ಇನ್ನು, ನಟ ಚೇತನ್ ಪರವಾಗಿ ವಕೀಲ ಬಾಲನ್ ಅವರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ನಾಳೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.