ವಿಧಾನಪರಿಷತ್ ಸ್ಥಾನಕ್ಕೆ ನಾಳೆ ರಾಜೀನಾಮೆ ನೀಡುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಿಂದ ನನಗೆ ಬುಲಾವ್ ಬಂದಿದೆ. ಹೈಕಮಾಂಡ್ ನವರು ಏನು ಹೇಳುತ್ತಾರೋ ನೋಡೋಣ. ಹೈಕಮಾಂಡ್ ಜೊತೆ ಚರ್ಚಿಸಿದ ನಂತರ ಸಭೆ ನಡೆಸುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಭಾನುವಾರ ಹೇಳಿಕೆ ನೀಡುವ ಮೂಲಕ ಈ ಮೊದಲು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಹೇಳಿಕೆಗೆ ಯೂಟರ್ನ್ ಹೊಡೆದಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಷತ್ ನಲ್ಲಿ ಮತಾಂತರ ನಿಷೇಧ ಬಿಲ್ ಮಂಡನೆ ಆಗಲಿದೆ. ನಾನು ರಾಜೀನಾಮೆ ಕೊಟ್ಟರೆ ಬಿಜೆಪಿಗೆ ಲಾಭವಾಗುತ್ತೆ. ಬಿಜೆಪಿಯವರಿಂದ ಹಣ ಪಡೆದಿದ್ದಾರೆಂದು ಆರೋಪ ಬರುತ್ತದೆ. ಹೀಗಾಗಿ ಬಜೆಟ್ ಅಧಿವೇಶನದ ನಂತರ ರಾಜೀನಾಮೆ ಬಗ್ಗೆ ನಿರ್ಧರಿಸುವೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ, ಕಾಂಗ್ರೆಸ್ ಪಕ್ಷ ತ್ಯಜಿಸುವ, ಮತ್ತೊಂದು ಪಕ್ಷ ಸೇರುವ ಬಗ್ಗೆ ನಿರ್ಧಾರ ತಿಳಿಸುವುದನ್ನು ತಾತ್ಕಾಲಿಕವಾಗಿ ಮುಂದೂಡಿದಂತಾಗಿದೆ.
ಇದಕ್ಕೂ ಮೊದಲು ದಾವಣಗೆರೆಯಲ್ಲಿ ಸಿ.ಎಂ. ಇಬ್ರಾಹಿಂ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಕಥೆ ಮುಗಿದಿದೆ. ಅದನ್ನ ಸುಡಬೇಕೋ, ಹೂಳಬೇಕೋ ಎಂಬ ಪ್ರಶ್ನೆ ಇದೆ. ಬಿಜೆಪಿಯವರದ್ದು ಬಸವಕೃಪ ಅಂದರೆ ಹೂಳಬೇಕಾಗುತ್ತೆ. ಕೇಶವಕೃಪ ಅಂದರೆ ಸುಡಬೇಕಾದ ಸ್ಥಿತಿ ಇದೆ. ಸಿಎಂ ಬೊಮ್ಮಾಯಿ ಸರ್ಕಾರ ಪಂಕ್ಚರ್ ಆಗಿರುವ ಬಸ್. ಅದು ಯಾವಾಗ ಏನಾಗುತ್ತೆ ಎಂಬುದು ಗೊತ್ತಿಲ್ಲ. ಕೆಲವೇ ದಿನಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಬಹುದು ಎಂದು ಹೇಳಿದ್ದಾರೆ.