ಬೆಂಗಳೂರು: ನಾಳೆ ನವೆಂಬರ್ 8ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಲಿದೆ. ಭಾರತದ ಪ್ರಮುಖ ಸ್ಥಳಗಳಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದೆ.
ಈ ಗ್ರಹಣವು ದಕ್ಷಿಣ ಅಮೆರಿಕಾ, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ, ಏಷ್ಯಾ, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದಲ್ಲಿ ಗೋಚರಿಸುತ್ತದೆ. ಭಾರತದಲ್ಲಿ, ಚಂದ್ರೋದಯದ ಸಮಯದಲ್ಲಿ ಗ್ರಹಣವು ಎಲ್ಲಾ ಸ್ಥಳಗಳಿಂದ ಗೋಚರಿಸುತ್ತದೆ ಎಂದು ಮೂಲಗಳು ತಿಳಿಸಿವೆ
ಗ್ರಹಣವು ಮಧ್ಯಾಹ್ನ 2.39ಕ್ಕೆ ಸ್ಪರ್ಶಿಸಿ ಅಪರಾಹ್ನ 4.29ಕ್ಕೆ ಉಚ್ಛ್ರಾಯ ಮಧ್ಯ ಸ್ಥಿತಿಗೆ ತಲುಪಿ ಸಂಜೆ 6.19ಕ್ಕೆ ಮೋಕ್ಷವಾಗಲಿದೆ. ಚಂದ್ರೋದಯ ಸಂಜೆ 5.59ಕ್ಕೆ ಆಗಲಿದ್ದು, ಆ ನಂತರ ಗ್ರಹಣ ಕಾಣಿಸುತ್ತದೆ. ಆದರೆ ಮೋಕ್ಷ ಕಾಲ ಸಂಜೆ 6.19ಕ್ಕೆ ಇರುವುದರಿಂದ 20 ನಿಮಿಷದಲ್ಲಿ ಚಂದ್ರ ಗ್ರಹಣದ ದರ್ಶನ ಸಹಿತ ಇಡೀ ಗ್ರಹಣ ಮುಗಿದು ಹೋಗುತ್ತದೆ. ಇದು ಕಾರ್ತಿಕ ಹುಣ್ಣಿಮೆ ಗ್ರಹಣವಾಗಿದೆ.
ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬರುವುದನ್ನು ಚಂದ್ರಗ್ರಹಣ ಎನ್ನುತ್ತಾರೆ. ಈ ಸಮಯದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಚಂದ್ರನು ಸಂಪೂರ್ಣವಾಗಿ ಮುಚ್ಚಲ್ಪಡುತ್ತಾನೆ. ಅದೇ ಸಮಯದಲ್ಲಿ, ಚಂದ್ರನು ಭೂಮಿಯ ಸುತ್ತ ಸುತ್ತುತ್ತಾನೆ, ಚಂದ್ರನು ಭೂಮಿಯ ನೆರಳಿನಲ್ಲಿ ಉಳಿಯುವವರೆಗಿನ ಸ್ಥಿತಿಯನ್ನು ನಾವು ಚಂದ್ರಗ್ರಹಣ ಎಂದು ಹೇಳುತ್ತೇವೆ.