ಶಾಲಾ ಕಾಲೇಜುಗಳಲ್ಲಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದ ಸರ್ಕಾರವು ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಮೂಲಕ ಹುಳುಕುಗಳನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ, “ರಾಜ್ಯದ 64% ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳು ಸರಿಯಾಗಿಲ್ಲ. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆ ಕಾಣುತ್ತಿಲ್ಲ. ದೆಹಲಿಯಲ್ಲಿ 98% ಫಲಿತಾಂಶವಿದ್ದರೆ, ಕರ್ನಾಟಕದಲ್ಲಿ ಕೇವಲ 65% ಫಲಿತಾಂಶ ಬರುತ್ತಿದೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಕೆಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಎಲ್ಲ ತರಗತಿಗಳನ್ನು ನೋಡಿಕೊಳ್ಳಬೇಕಾಗಿದೆ. ಕುಡಿಯುವ ನೀರು, ಮೇಲ್ಛಾವಣಿ, ಬೆಂಚು, ಕುರ್ಚಿ ಸೇರಿದಂತೆ ಮೂಲಸೌಕರ್ಯಗಳು ಶೋಚನೀಯ ಸ್ಥಿತಿಯಲ್ಲಿವೆ. ಇವೆಲ್ಲವನ್ನು ಮರೆಮಾಚಲು ಹಿಜಾಬ್ ವಿವಾದ ಸೃಷ್ಟಿಸಲಾಗುತ್ತಿದೆ” ಎಂದು ಆರೋಪಿಸಿದರು.
“ವಿದ್ಯಾರ್ಥಿಗಳೇ ಸಮಾಜದ ಭವಿಷ್ಯ. ರಾಜಕೀಯ ಲಾಭಕ್ಕಾಗಿ ಈಗ ಅವರಲ್ಲಿ ಕೋಮು ಭಾವನೆ ಪ್ರಚೋದಿಸಿದರೆ, ಭವಿಷ್ಯದಲ್ಲಿ ಕೆಟ್ಟ ಪರಿಣಾಮವನ್ನು ಸಮಾಜ ಅನುಭವಿಸಬೇಕಾಗುತ್ತದೆ. ರಾಜ್ಯದ ಕೆಲವು ಸಚಿವರು ಹಾಗೂ ಶಾಸಕರು ವಿವಾದವನ್ನು ಬಗೆಹರಿಸುವ ಬದಲು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಸರ್ಕಾರಕ್ಕೆ ತಾಕತ್ತಿದ್ದರೆ ರಾಜ್ಯದ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ಕುರಿತು ಚರ್ಚೆಗೆ ವೇದಿಕೆ ಸಿದ್ಧಪಡಿಸಲಿ” ಎಂದು ಪೃಥ್ವಿ ರೆಡ್ಡಿ ಸವಾಲು ಹಾಕಿದರು.