ಇಸ್ರೇಲ್‌ನ ಬೇಹುಗಾರಿಕೆ ಕುತಂತ್ರಾಂಶ ಪೆಗಾಸಸ್ ಬಳಸಿ ಬೇಹುಗಾರಿಕೆ ನಡೆಸಿರುವ ಆರೋಪದ ಬಗ್ಗೆ ತನಿಖೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಬುಧವಾರ ಫೆ.23 ರಮದು ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಮುಂತಾದವರ ಮೇಲೆ ಈ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬ ಆರೋಪದ ನಂತರ ತನಿಖೆಗೆ ಸೈಬರ್ ತಜ್ಞರ ಸಮಿತಿ ರಚಿಸಲಾಗಿತ್ತು. ಅಕ್ಟೋಬರ್ 27ರ ನಂತರ ಸುಪ್ರೀಂ ಕೋರ್ಟ್ ಇದೇ ಮೊದಲ ಬಾರಿಗೆ ಈ ಕುರಿತು ದಾಖಲಾಗಿರುವ ಅರ್ಜಿಗಳ ಬ್ಯಾಚ್ ಅನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಲಿದೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಪತ್ರಕರ್ತರಾದ ಎನ್. ರಾಮ್, ಶಶಿಕುಮಾರ್ ಸಲ್ಲಿಸಿದ ಅರ್ಜಿಗಳು ಸೇರಿ 12 ಸಾರ್ವಜನಿಕ ಹಿತಾಸಕ್ತಿಗಳ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.