ಸುಳ್ಯ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಬೆಳಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಟ್ಬಾಲ್ ಮತ್ತು ಸುಳ್ಯದ ಇಬ್ರಾಹಿಂ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರವೀಣ್ ನೆಟ್ಟಾರು (32) ಅವರನ್ನು ಜುಲೈ 26 ರಂದು ಮೂವರು ದುಷ್ಕರ್ಮಿಗಳು ಮಾರಕಾಸ್ತಗಳಿಂದ ಹಲ್ಲೆ ಮಾಡಿ, ಹತ್ಯೆಗೈದಿದ್ದರು. ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ, ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು.
ತನಿಖೆ ಆರಂಭಿಸಿದ್ದ ಎನ್ಐಎ ಅಧಿಕಾರಿಗಳು ಪ್ರಕರಣದ ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ನವೆಂಬರ್ 2ರಂದು ಘೋಷಿಸಿದ್ದರು. ಪ್ರಕರಣದ ಆರೋಪಿ ಸುಳ್ಯದ ಮಹಮ್ಮದ್ ಮುಸ್ತಫಾ ಎಸ್ ಅಲಿಯಾಸ್ ಮುಸ್ತಫಾ ಪೈಚಾರ್ ಮತ್ತು ಕೊಡಗು ಜಿಲ್ಲೆಯ ಮಡಿಕೇರಿಯ ತುಫೈಲ್ ಎಂಎಚ್ ಎಂಬವರ ಬಗ್ಗೆ ಮಾಹಿತಿ ನೀಡಿದರೆ, ತಲಾ 5 ಲಕ್ಷ ರೂ. ಬಹುಮಾನ. ಹಾಗೂ, ಕಲ್ಲುಮುಟ್ಟು ಮನೆಯ ಉಮ್ಮರ್ ಫಾರೂಕ್ ಎಂಆರ್ ಅಲಿಯಾಸ್ ಉಮ್ಮರ್ ಮತ್ತು ಬೆಳ್ಳಾರೆಯ ಅಬೂಬಕ್ಕರ್ ಸಿದ್ದಿಕ್ ಅಲಿಯಾಸ್ ಪೇಂಟರ್ ಸಿದ್ದಿಕ್ ಅಲಿಯಾಸ್ ಗುಜಿ ಸಿದ್ದಿಕ್ ಬಗ್ಗೆ ಸುಳಿವು ನೀಡಿದರೆ ತಲಾ 2 ಲಕ್ಷ ರೂ. ಬಹುಮಾನ ನೀಡುವುದಾಗಿ ತನಿಖಾ ಸಂಸ್ಥೆ ಹೇಳಿತ್ತು.
ಇದೀಗ, ದಕ್ಷಿಣ ಕನ್ನಡ, ಮೈಸೂರು, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಬೆಳ್ಳಾರೆಯಲ್ಲಿ ಇತರ ಮೂವರನ್ನು ವಶಕ್ಕೆ ಪಡೆದಿದ್ದಾರೆ.