ಉತ್ತರ ಪ್ರದೇಶದಲ್ಲಿ ಕೊನೆಯ ಹಂತದ ವಿಧಾನಸಭಾ ಚುನಾವಣೆಗೂ ಮುನ್ನ ಭಾರತೀಯ ಜನತಾ ಪಕ್ಷದ ಸಂಸದೆ ರೀಟಾ ಬಹುಗುಣ ಜೋಶಿ ಅವರ ಮಗ ಮಾಯಾಂಕ್ ಜೋಶಿ ಶನಿವಾರ ಸಮಾಜವಾದಿ (ಎಸ್ಪಿ) ಪಕ್ಷಕ್ಕೆ ಸೇರ್ಪಡೆಗೊಂಡರು. ಅಜಮ್ ಘರ್ ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್, “ಭಾರತೀಯ ಜನತಾ ಪಕ್ಷದ ಸಂಸದೆ ರೀಟಾ ಬಹುಗುಣ ಜೋಶಿ ಅವರ ಮಗ ಮಾಯಾಂಕ್ ಜೋಶಿ ಅವರು ಇಂದು ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ” ಎಂದು ಹೇಳಿದರು.
ಈ ಹಿಂದೆ ಜನವರಿಯಲ್ಲಿ, ರೀಟಾ ಬಹುಗುಣ ಜೋಶಿ ಅವರು ಲಕ್ನೋ ಕಂಟೋನ್ಮೆಂಟ್ ಸ್ಥಾನದಿಂದ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಗನಿಗೆ ಬಿಜೆಪಿಯಿಂದ ಟಿಕೆಟ್ ಕೋರಿದ್ದರು. ತಮ್ಮ ಮಗನಿಗೆ ಲಕ್ನೋ ಕಂಟೋನ್ಮೆಂಟ್ ಸ್ಥಾನದಿಂದ ಟಿಕೆಟ್ ಸಿಗದಿದ್ದರೆ, ಅವರು ತಮ್ಮ ಲೋಕಸಭಾ ಸದಸ್ಯತ್ವವನ್ನು ಬಿಟ್ಟುಕೊಡುವುದಾಗಿ ರೀಟಾ ಬಹುಗುಣ ಜೋಶಿ ಹೇಳಿದ್ದರು. ಆದರೆ ತನ್ನ ಮಗನಿಗೆ ಟಿಕೆಟ್ ನಿರಾಕರಿಸಿದಾಗ, ಅವರು”ಪಕ್ಷದ ನಿರ್ಧಾರವನ್ನು ಗೌರವಿಸುತ್ತೇನೆ” ಎಂದು ಹೇಳಿದ್ದರು.
ಫೆಬ್ರವರಿ 10 ರಿಂದ ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಇಲ್ಲಿಯವರೆಗೆ, ಆರು ಹಂತಗಳ ಮತದಾನ ನಡೆಸಲಾಗಿದೆ. ಮಾರ್ಚ್ 7 ರಂದು ಏಳನೇ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.