ಬಿಹಾರ ರಾಜ್ಯದ ಮಧುಬನಿ ರೈಲು ನಿಲ್ದಾಣದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಶನಿವಾರ ನಡೆದಿದೆ.
ನಿಲ್ದಾಣದಲ್ಲಿ ನಿಂತಿದ್ದ ಸ್ವತಂತ್ರ ಸೇನಾನಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ರೈಲಿನ ಐದು ಭೋಗಿಗಳು ಅಗ್ನಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಭೇಟಿ ಕೊಟ್ಟು ರಕ್ಷಣಾ ಕಾರ್ಯಾಚರಣೆ ಕೈಗೊಂಡು ಬೆಳಿಗ್ಗೆ 9:50ಕ್ಕೆ ಬೆಂಕಿಯನ್ನು ನಂದಿಸಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೂರ್ವ ಕೇಂದ್ರ ರೈಲ್ವೆ ಸಿಪಿಆರ್ಒ ಮಾಹಿತಿ ನೀಡಿದೆ.
ಮಧುಬನಿಯ ಜಯನಗರದಿಂದ ದೆಹಲಿಗೆ ಚಲಿಸುವ ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ನಲ್ಲಿ ಈ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಹೊತ್ತಿಕೊಂಡಾಗ ರೈಲು ಖಾಲಿಯಾಗಿತ್ತು. ಯಾವುದೇ ಪ್ರಾಣ ಹಾನಿ ಅಥವಾ ಯಾರಿಗೂ ಗಾಯವಾಗಿಲ್ಲ. ಅಗ್ನಿ ಅವಘಡಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ.