ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಗಳನ್ನು ತೆರವುಗೊಳಿಸೋಕೆ ಬಿಬಿಎಂಪಿ ಬುಲ್ಡೋಜರ್ ಗಳು ಘರ್ಜಿಸಲಿವೆ.
ಈ ಕುರಿತು ಸಭೆ ನೆಡೆಸಿದ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶೀಘ್ರವೇ ಒತ್ತುವರಿ ತೆರವು ಕೈಗೊಳ್ಳಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಈಗಾಗಲೇ ತಹಶೀಲ್ದಾರ್ ರವರಿಂದ ಆದೇಶಗಳನ್ನು ಜಾರಿಮಾಡಿರುವ ಒತ್ತುವರಿ ತೆರವು ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆಯಲಿದೆ.
ನಗರದ 8 ವಲಯಗಳಲ್ಲಿಯೂ ಬೃಹತ್ ನೀರುಗಾಲುವೆ, ರಾಜಕಾಲುವೆ ಒತ್ತುವರಿ ತೆರವು ಕಾಯಾಚರಣೆ ನಡೆಸಬೇಕು. ಈ ವೇಳೆ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ಮಾಡುವಂತೆ ತುಷಾರ್ ಗಿರಿನಾಥ್ ನಿರ್ದೇಶಿಸಿದರು.
ಈಗಾಗಲೇ ಮಾರ್ಕಿಂಗ್ ಮಾಡಲಾಗಿದ್ದು, ಆ ಪ್ರದೇಶಗಳಲ್ಲಿ ಒತ್ತುವರಿ ತೆರವುಗೊಳಿಸಿ ಅಗತ್ಯವಿದ್ದ ಕಡೆ ಸಮರ್ಪಕ ಕಾಲುವೆಯನ್ನು ನಿರ್ಮಾಣ ಮಾಡಬೇಕು. ಜೊತೆಗೆ ಕೋರ್ಟ್ ನಲ್ಲಿರುವ ಪ್ರಕರಣಗಳನ್ನು ನಿಗಧಿತ ಸಮಯದಲ್ಲಿ ಇತ್ಯರ್ಥಪಡಿಸಿಕೊಂಡು ಒತ್ತುವರಿ ತೆರವುಗೊಳಿಸಬೇಕು ಅಂತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಈ ಪ್ರಕಾರ ನಗರದಲ್ಲಿ ಹೊಸ ಒತ್ತುವರಿಗಳು ಸೇರಿದಂತೆ 3147 ಒತ್ತುವರಿಗಳನ್ನು ಗುರುತಿಸಲಾಗಿದೆ. 2247 ಒತ್ತುವರಿಗಳನ್ನು ಇದುವರೆಗೆ ತೆರವುಗೊಳಿಸಲಾಗಿದೆ. ಇನ್ನು 900 ಒತ್ತುವರಿ ತೆರವು ಬಾಕಿ ಇದೆ.