ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಕೆ ಜೆ ಜಾರ್ಜ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ:
ಇಂಧನ, ರಸಗೊಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಮೋದಿ ಸರ್ಕಾರದ ವಿರುದ್ಧ ದೇಶದಾದ್ಯಂತ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಮೋದಿ ಅವರು ಮುಖ್ಯಮಂತ್ರಿ ಹಾಗೂ ಮನಮೋಹನ್ ಸಿಂಗ ಅವರ ಪ್ರಧಾನಿಯಾಗಿದ್ದಾಗ, ಮೋದಿ ಅವರ ನಾಯಕತ್ವದಲ್ಲಿ ಅಲ್ಪ ಪ್ರಮಾಣದ ಬೆಲೆ ಏರಿಕೆ ಆದರೂ ಹೋರಾಟ ಮಾಡಿದ್ದರು. ಮನಮೋಹನ್ ಸಿಂಗ್ ಅವರ ಸರ್ಕಾರವನ್ನು ಕಟು ಶಬ್ಧಗಳಿಂದ ಟೀಕೆ ಮಾಡಿದ್ದರು.
ಬಿಜೆಪಿ ಸರ್ಕಾರ ಎಂದರೆ ಸುಳ್ಳಿನ ಕಾರ್ಖಾನೆ. ಮೋದಿ ಅವರು ಪ್ರಧಾನಿಯಾದ ನಂತರ ನಿರಂತರವಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ಸ್ವತಂತ್ರಯ ಭಾರತದಲ್ಲಿ ಅನೇಕ ಪ್ರಧಾನಿಗಳು ಬಂದು ಹೋಗಿದ್ದಾರೆ, ಅದರೆ ಮೋದಿಯವರಷ್ಟು ಸುಳ್ಳು ಹೇಳಿದ ಪ್ರಧಾನಿ ಮತ್ತೊಬ್ಬರಿಲ್ಲ.
ಅಚ್ಛೇದಿನ ಬರುತ್ತದೆ ಎಂದು ಹೇಳಿದರು, ಮೋದಿ ಅವರೇ ಈ ದೇಶಕ್ಕೆ ರೈತರು, ಬಡವರು, ಯುವಕರು, ಮಹಿಳೆಯರಿಗೆ ಒಳ್ಳೇ ದಿನ ಬಂತಾ? ಮನಮೋಹನ್ ಸಿಂಗ್ ಅವರ ಸರ್ಕಾರ ಅಂತ್ಯವಾಗಿದ್ದು 2014ರಲ್ಲಿ, ಮೋದಿ ಅರು ಮೇ ತಿಂಗಳಲ್ಲಿ ಪ್ರಧಾನಿಯಾದರು ಈಗ 8 ವರ್ಷ ತುಂಬಲಿದೆ. ಈ 8 ವರ್ಷಗಳಲ್ಲಿ 2014ರಲ್ಲಿ ಕೊಟ್ಟ ಯಾವುದಾದರೂ ಭರವಸೆ ಈಡೇರಿಸಿರುವ ನಿದರ್ಶನವನ್ನು ಕೊಡಿ.
ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಡೀಸಲ್ ಮೇಲಿನ ಸುಂಕ 3.46 ರೂ. ಮಾತ್ರ. ಪೆಟ್ರೋಲ್ ಮೇಲೆ 9,20 ರೂ. ಅಬಕಾರಿ ಸುಂಕ ಇತ್ತು. ಇಂದು ಡೀಸೆಲ್ ಮೇಲೆ 31.84 ಹಾಗೂ ಪೆಟ್ರೋಲ್ ಮೇಲೆ 32.98 ರೂ. ಅಬಕಾರಿ ಸುಂಕ ವಿಧಿಸಲಾಗಿದೆ. ಇದು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಲೆ ಏರಿಕೆಯಲ್ಲ. ಕೇಂದ್ರ ಸರ್ಕಾರ ಮಾಡುತ್ತಿರುವ ವಸೂಲಿ. ಮೋದಿ ಅವರೇ ಇದು ಹಗಲು ದರೋಡೆಯಲ್ಲವೇ?
ಮೋದಿ ಅವರು ಪ್ರಧಾನಿಯಾದ ನಂತರ ಇಂಧನ ತೈಲದ ಅಬಕಾರಿ ಸುಂಕದಿಂದ 26 ಲಕ್ಷ ಕೋಟಿ ವಸೂಲು ಮಾಡಿದ್ದಾರೆ. ನಿಮಗೆ ಸಾಮಾನ್ಯ ಜನ, ರೈತರಿಗೆ ಒಳ್ಳೆಯದು ಮಾಡಬೇಕಾದರೆ ಈ ಅಬಕಾರಿ ಸುಂಕ ಇಳಿಸಿ. ಡೀಸೆಲ್ ಸುಂಕ 10 ರೂ.ಗೆ ಪೆಟ್ರೋಲ್ ಸುಂಕ 15 ರೂ.ಗೆ ಇಳಿಸಿ. ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಲ್ಲಿ ಕಚ್ಛಾತೈಲ ಬೆಲೆ ಹೆಚ್ಚಾಗಿದೆ ಎಂದು ಕಾರಣ ಹೇಳುತ್ತಾರೆ.
ಮೋದಿ ಪ್ರಧಾನಿ ಆದ ನಂತರ ಕಚ್ಛಾತೈಲ ಬೆಲೆ ಕಡಿಮೆ ಆಗಿತ್ತು, ಈಗ ಮತ್ತೆ ಹೆಚ್ಚಾಗಿದೆ. 2016ರಲ್ಲಿ ಪ್ರತಿ ಬ್ಯಾರೆಲ್ ಗೆ 46 ಡಾಲರ್ ಆಗಿತ್ತು ಆಗ ಎಷ್ಟು ಕಡಿಮೆ ಮಾಡಿದಿರಿ? ಆಗ ಯಾಕೆ ಕಡಿಮೆ ಮಾಡಲಿಲ್ಲ? ಇಂದು 118 ಡಾಲರ್ ಆಗಿದೆ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಡೀಸೆಲ್ ಮೇಲೆ 46 ರೂ. ಪೆಟ್ರೇಲ್ 68 ರೂ. ಇತ್ತು. ಮೋದಿ ಅವರೇ ನೀವು ಈಗ ಪೆಟ್ರೋಲ್ 113, ಡೀಸೆಲ್ 97 ರೂ. ಆಗಿದೆ. ವ್ಯಾತ್ಯಾಸ ಎಷ್ಟಿದೆ? ಇದು ಹಗಲು ದರೋಡೆ ಅಲ್ಲವೇ?
ಮೋದಿ ಅವರು 2022ಕ್ಕೆ ರೈತರ ಆದಾಯ ಡಬಲ್ ಮಾಡುತ್ತೇನೆ ಎಂದರು. ಇಂದು ರೈತರ ಆದಾಯವಲ್ಲ, ಸಾಲ ದುಪ್ಪಟ್ಟಾಗಿದೆ. ರೈತರು ಅವರೇ ಕೂಲಿ ಕಾರ್ಮಿಕರಾಗುವ ಸ್ಥಿತಿ ಬಂದಿದೆ. ಬಡತನ ಹೆಚ್ಚುತ್ತಿದೆ. ಮೋದಿ ಅವರೇ ಎಲ್ಲಿ ದುಪ್ಪಟ್ಟು ಆದಾಯ ಬಂದಿದೆ. ಡಿಎಪಿ ಗೊಬ್ಬರ 50 ಕೆ.ಜಿಗೆ 150 ರೂ. ಹೆಚ್ಚಿಸಿದ್ದೀರಿ. ರೈತರ ಆದಾಯ ದುಪ್ಪಟ್ಟು ಹೇಗೆ ಆಗುತ್ತದೆ? ಗೊಬ್ಬರ ಸಬ್ಸಿಡಿ ಇಳಿಸಿದ್ದೀರಿ. ಅನುದಾನ ಕಡಿಮೆ ಮಾಡಿ ರೈತರ ಮೇಲೆ ಚಪ್ಪಡಿ ಎಳೆಯುತ್ತಿದ್ದೀರಿ.
ಅಡುಗೆ ಅನಿಲ 2014ರಲ್ಲಿ 14.2 ಕೆ.ಜಿ ಸಿಲಿಂಡರ್ 414 ರೂ. ಇತ್ತು. ಆಗ ಮನಮೋಹನ್ ಸಿಂಗ್ ಅವರು ಸಬ್ಸಿಡಿ ನೀಡುತ್ತಿದ್ದರು. ಇಂದು 1000 ರೂ. ಆಗಿದೆ. ಸುಮಾರು 600 ರೂ. ಹೆಚ್ಚಾಗಿದೆ. ಇತ್ತೀಚೆಗೆ ಅಡುಗೆ ಅನಿಲ 50 ರೂ. ಹಾಗೂ ವಾಣಿಜ್ಯ ಗ್ಯಾಸ್ 250 ರೂ ಹೆಚ್ಚಾಗಿದೆ. ಆ ಮೂಲಕ ಹೆಣ್ಣಿನ ಶೋಷಣೆಯಾಗುತ್ತಿದೆ. ಜನಸಾಮಾನ್ಯರ ಆದಾಯ ಹೆಚ್ಚಾಗಿದೆಯಾ? ಇದೆಲ್ಲವನ್ನು ಜನರಿಗೆ ತಿಳಿಸಬೇಕು.
ಮೋದಿ ಸರ್ಕಾರ ಬಡವರಿಗೆ ಅನ್ಯಾಯ, ಸುಲಿಗೆ, ದರೋಡೆ ಮಾಡುತ್ತಿದೆ ಎಂದು ತಿಳಿಸಬೇಕು. ಕಾರ್ಪೋರೇಟ್ ಕಂಪನಿಗಳ ತೆರಿಗೆ ಶೇ.35ರಿಂದ ಶೇ.23ಕ್ಕೆ ಇಳಿಸಲಾಗಿದೆ. ಬಡವರ ತಲೆ ಬೋಳಿಸಿ, ಶ್ರೀಮಂತರಿಗೆ ತೆರಿಗೆ ಇಳಿಸಿದರು. ಇದರಿಂದ 4.5 ಲಕ್ಷ ಕೋಟಿ ಸರ್ಕಾರಕ್ಕೆ ನಷ್ಟ.
ಅದಾನಿ ಒಟ್ಟು ಸಂಪತ್ತು 57 ಸಾವಿರ ಕೋಟಿ ಇತ್ತು, ಈಗ ಅವರ ಆಸ್ತಿ 7 ಲಕ್ಷ ಕೋಟಿ ಆಗಿದೆ. ಅಂಬಾನಿ ಅವರ ಸಂಪತ್ತು 1.57 ಲಕ್ಷ ಕೋಟಿ ಇತ್ತು, ಇಂದು ಅವರ ಸಂಪತ್ತು 8 ಲಕ್ಷ ಕೋಟಿ. ಬಡವರು, ರೈತರ ಆದಾಯ ಕಡಿಮೆ ಆಯ್ತು, ಅಂಬಾನಿ ಅದಾನಿ ಆದಾಯ ಹೆಚ್ಚಾಯ್ತು. ಇದು ದೇಶಕ್ಕೆ ಮೋದಿಯ ಕೊಡುಗೆ.
ಮೋದಿ ಪ್ರಧಾನಿ ಆದಾಗ ದೇಶದ ಮೇಲೆ ಸಾಲ 53.11 ಲಕ್ಷ ಕೋಟಿ. ಆದರೆ ಮುಂದಿನ ಮಾರ್ಚ್ ಅಂತ್ಯಕ್ಕೆ ದೇಶದ ಸಾಲ 152 ಲಕ್ಷ ಕೋಟಿ. 8 ವರ್ಷದಲ್ಲಿ ಈ ದೇಶದಲ್ಲಿ ಮಾಡಿರುವ ಸಾಲ 100 ಲಕ್ಷ ಕೋಟಿ. ಈ ದೇಶ ಉಳಿಯುತ್ತದಾ? ನಮ್ಮ ದೇಶದ ಬಜೆಟ್ ನ ಶೇ.45ರಷ್ಟು ಮೋತ್ತ ಬಡ್ಡಿ ಕಟ್ಟಲಾಗುತ್ತಿದೆ. ರೈತರು, ಬಡವರು, ದಲಿತರು ಕಂಗಾಲಾಗಿದ್ದಾರೆ.
ಇಂಧನ ಬೆಲೆ ಹೆಚ್ಚಾದರೆ ಎಲ್ಲ ಬೆಲೆ ಹೆಚ್ಚಾಗುತ್ತದೆ. ಬಡವರು ಉಪಯೋಗಿಸುವ ಜನಔಷಧಿ ಶೇ.10ರಷ್ಟು ಹೆಚ್ಚಿಸಿದರು. ವಿದ್ಯುತ್ ಬೆಲೆ ಪ್ರತಿ ಯುನಿಟ್ 35 ಪೈಸೆ ಹೆಚ್ಚಳ, ನೀರಿನ ಬಿಲ್, ಅಡುಗೆ ಎಣ್ಣೆ, ಕಬ್ಬಿಣ, ಸೀಮೆಂಟ್ ಹೆಚ್ಚಾಯ್ತು, ಜನ ಸಾಮಾನ್ಯರು ಬದುಕುವುದು ಹೇಗೆ? ಮೋದಿ ಪ್ರಧಾನಿಯಾಗಿ ಇರಬೇಕಾ? ಈ ಸರ್ಕಾರ ಬೇಕಾ? ಬೆಲೆ ಏರಿಕೆ, ನಿರುದ್ಯೋಗ ಬಗ್ಗೆ ಮೋದಿ ಸರ್ಕಾರ ಮಾತನಾಡುತ್ತಾರಾ?
ಈ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು 11 ಕೋಟಿ ಉದ್ಯೋಗ ನೀಡುತ್ತಿದ್ದವು, ಈಗ ಅವುಗಳು 2.5 ಕೋಟಿ ಉದ್ಯೋಗ ಮಾತ್ರ ನೀಡುತ್ತಿವೆ. ಯುವಕರು ಉದ್ಯೋಗ ಕೇಳಿದರೆ ಪಕೋಡ ಮಾರಲು ಹೋಗಿ ಎಂದು ಹೇಳುತ್ತೀರಲ್ಲ ಮೋದಿ ಅವರೇ, ನಿಮಗೆ ಮಾನ ಮರ್ಯಾದೆ ಇದೆಯೇ? ಯುವಕರು ಗೊತ್ತಿಲ್ಲದೇ ಮೋದಿ ಮೋದಿ ಎಂದರು. ಅವರ ಹೊಟ್ಟೆ ಮೇಲೆ ಹೊಡೆದರಲ್ಲಾ. ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ.
ಇಲ್ಲಿನ ಬೊಮ್ಮಾಯಿ ಸರ್ಕಾರ ಇದನ್ನು ಮುಚ್ಚಿಕೊಳ್ಳಲು ಹಿಜಾಹಬ್, ಹಲಾಲ್, ಭಗವದ್ಗೀತೆ, ವ್ಯಾಪಾರ ನಿರ್ಬಂಧ, ಧ್ವನಿವರ್ಧಕ ವಿಚಾರ ಆರಂಭಿಸಿದ್ದೀರಲ್ಲಾ. ಇದು ಸಂಘಪರಿವಾರದವರ ದೇಶ ಅಲ್ಲಾ, ಈಬಗ್ಗೆ ಮಾಧುಸ್ವಾಮಿ ಸ್ವಲ್ಪ ನಿಜ ಹೇಳಿದ್ದಾರೆ. ಇದು ಎಲ್ಲ ಭಾರತೀಯರ ದೇಶ.
ಬಜರಂಗದಳದವರು ಕಲ್ಲಂಗಡಿ ಮಾರುವ ವ್ಯಾಪಾರಿ ಮೇಲೆ ದಾಳಿ ಮಾಡಿದರೂ ಬೊಮ್ಮಾಯಿ ಹಾಗೂ ಜ್ಞಾನೇಂದ್ರ ಅವರೇ ಸುಮ್ಮನೇ ಕೂತಿದ್ದೀರಲ್ಲಾ, ನಿಮಗೆ ನಾಚಿಕೆಯಾಗುವುದಿಲ್ಲವೇ? ಅಧಿಕಾರದಲ್ಲಿ ಹೇಗೆ ಮುಂದುವರಿಯುತ್ತಿದ್ದೀರಿ? ಬೊಮ್ಮಾಯಿ ಅವರು ಮೌನಿ. ಕಾರಣ ಆರ್ ಎಸ್ಎಸ್ ಆಟ ಇದೆಲ್ಲಾ. ಅವರಿಂದಲೇ ಈ ಗಿರಾಕಿ ಸಿಎಂ ಆಗಿದ್ದಾರೆ. ಇವರು ನನಗೂ ಹಾಗೂ ಇದಕ್ಕೆ ಸಂಬಂಧವಿಲ್ಲದಂತೆ ಕೂತಿದ್ದಾರೆ. ನೀವು ಈ ರಾಜ್ಯದ ಮುಖ್ಯಮಂತ್ರಿಗಳು, ಸಮಾಜ ನಾಶ ಮಾಡಬೇಡಿ. ನಿಮ್ಮಿಂದ ಆಗಲಿಲ್ಲ ಎಂದರೆ ರಾಜೀನಾಮೆ ಕೊಡಿ, ಈ ರಾಜ್ಯವನ್ನು ನಾವು ಸರಿ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ ನಾಶವಾಗಿದೆ. ಕಾನೂನು ಸುವ್ಯವಸ್ಥೆ ಹಾಳಾದರೆ ದೇಶ ಅಭಿವೃದ್ಧಿ ಆಗುವುದಿಲ್ಲ. ಇಲ್ಲಿ ಬಂಡವಾಳ ಹೂಡಲು ಯಾರು ಬರುತ್ತಾರೆ?
ಪರಿಸ್ಥಿತಿ ಅನುಕೂಲವಾಗಿರದಿದ್ದರೆ ಯಾರೂ ಬಂಡವಾಳ ಹೂಡುವುದಿಲ್ಲ, ಬಂಡವಾಳ ಹೂಡಿಕೆ ಮಾಡದಿದ್ದರೆ, ಉದ್ಯೋಗ ಸೃಷ್ಟಿ ಹೇಗೆ? ಉದ್ಯೋಗ ಸೃಷ್ಟಿಯಾಗದಿದ್ದರೇ ಜಿಡಿಪಿ ಬೆಳವಣಿಗೆ ಹೇಗೆ ಸಾಧ್ಯ? ನೀವು ಎಲ್ಲವನ್ನು ಹಾಳು ಮಾಡುತ್ತಿದ್ದೀರಿ.
ಮಾರ್ಚ್ ಅಂತ್ಯದವರೆಗೂ ರಾಜ್ಯದ ಮೇಲೆ ಇರುವ ಸಾಲ 5.18 ಲಕ್ಷ ಕೋಟಿ. ಈ ಸಾಲಕ್ಕೆ ಕಟ್ಟಬೇಕಿರುವ ಬಡ್ಡಿ 43 ಸಾವಿರ ಕೋಟಿ. ನಮ್ಮ ರಾಜ್ಯ ನೀಡುವ ತೆರಿಗೆ 3 ಲಕ್ಷ ಕೋಟಿ. ನಮಗೆ ಕೇಂದ್ರ ಕೊಡುವ ಅನುದಾನ 47 ಸಾವಿರ ಕೋಟಿ ಮಾತ್ರ. ರಾಜ್ಯ ಅಭಿವೃದ್ಧಿ ಹೇಗೆ ಆಗುತ್ತದೆ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಲ್ಲಿದೆ?
ಶಿವಮೊಗ್ಗದಲ್ಲಿ ಹರ್ಷ ಹತ್ಯೆಗೆ ಸರ್ಕಾರದಿಂದ 25 ಲಕ್ಷ ಕೊಟ್ಟರು. ಬೆಳ್ತಂಗಡಿಯಲ್ಲಿ ದಲಿತ ದಿನೇಶ್ ಬಜರಂಗದಳದವರಿಂದ ಕೊಲೆಯಾದಾಗ ಸರ್ಕಾರ ಒಂದು ರೂಪಾಯಿ ಪರಿಹಾರ ಕೊಡಲಿಲ್ಲ. ನರಗುಂದದಲ್ಲಿ ಶ್ರೀರಾಮ ಸೇನೆಯಿಂದ ಕೊಲೆಯಾದವರಿಗೆ ಒಂದು ರೂ. ಪರಿಹಾರ ಕೊಡಲಿಲ್ಲ. ಸಚಿವ ಈಶ್ವರಪ್ಪ ಸೆಕ್ಷನ್ 144 ಜಾರಿ ಇದ್ದರೂ ಶವ ಯಾತ್ರೆ ಮಾಡಿ ಅದನ್ನು ಉಲ್ಲಂಘಿಸಿದರು. ಆನಂದ್ ಕೂಬಾ ಸೆಕ್ಷನ್ 144 ಉಲ್ಲಂಘನೆ ಮಾಡಿದರು. ಅವರ ವಿರುದ್ಧ ಕ್ರಮ ಇಲ್ಲ.ಇವರ ವಿರುದ್ಧ ಏಫ್ ಐಆರ್ ಇಲ್ಲ. ಮೇಕೆದಾಟು ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಮೇಲೆ ಮೂರ್ನಾಲ್ಕು ಪ್ರಕರಣ ದಾಖಲಿಸಿದ್ದಾರೆ.
ಇದೇನಾ ನಿಮ್ಮ ಸಂವಿಧಾನ, ಕಾನೂನು ಪಾಲನೆ? ಅದಿವೇಶನದಲ್ಲಿ ಈ ದಲಿತರ ಹತ್ಯೆಗೂ ಪರಿಹಾರ ಕೊಡಿ ಎಂದೆ. ಕೊಡುತ್ತೇವೆ ಎಂದವರು ಈವರೆಗೂ ಕೊಟ್ಟಿಲ್ಲ. ಇದೇನು ಇವರಪ್ಪನ ಮನೆ ಹಣವೇ? ಜನರ ತೆರಿಗೆ ಹಣ. 45 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರ ನಾನು ನೋಡಿರಲಿಲ್ಲ.
ಇದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಅಧಿಕಾರ ಅನುಭವಿಸಬೇಕು ಎಂಬುದಕ್ಕೆ ಹೋರಾಟವಲ್ಲ. ಇಂತಹ ಕೆಟ್ಟ ಸರ್ಕಾರ ತೊಲಗಿಸಿ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ಅತ್ಯಂತ ಕೆಟ್ಟ, ಅಮಾನವೀಯ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಕ್ರೈಸ್ತರು, ಮುಸಲ್ಮಾನರು ಆತಂಕದಲ್ಲಿ ಬದುಕುವ ಸ್ಥಿತಿಯಲ್ಲಿದೆ.
ಮಾತೆತ್ತಿದರೆ ತೈಲ ಕಂಪನಿ ನಮ್ಮ ಕೈಲಿಲ್ಲ ಎನ್ನುತ್ತಾರೆ. ಹಾಗಾದರೆ ನವೆಂಬರ್ ನಲ್ಲಿ ಕೊನೆ ಬಾರಿಗೆ ಬೆಲೆ ಏರಿಕೆ ಮಾಡಿದವರು ಮಾರ್ಚ್ 17ರ ವರೆಗೂ ಯಾಕೆ ಹೆಚ್ಚಿಸಲಿಲ್ಲ? ಪಂಚರಾಜ್ಯ ಚುನಾವಣೆ ಕಾರಣಕ್ಕೆ ಅಲ್ಲವೇ? 10ರಂದು ಫಲಿತಾಂಶ ಬಂತು, ನಂತರ ಏರಿಕೆ ಆಗಿದೆ. ಪೆಟ್ರೋಲ್ ಡೀಸೆಲ್ ತಲಾ 10 ರೂ. ಅಡುಗೆ ಅನಿಲ 50 ರೂ. ವಾಣಿಜ್ಯ ಗ್ಯಾಸ್ 250 ರೂ. ಹೆಚ್ಚಾಗಿದೆ. ಯಾಕೆ ಸುಳ್ಳು ಹೇಳುತ್ತೀರಿ?
ಬಿಜೆಪಿ ಬೆಂಬಲಿಸುವವರಿಗೂ ಹೇಳುತ್ತಿದ್ದೇನೆ. ಬಿಜೆಪಿ ಲೂಟಿ ಮಾಡುತ್ತಿದೆ. ಇದು ಕಾಂಗ್ರೆಸ್ ಮನೆಗೆ ಮಾತ್ರ ಬಿದ್ದಿರುವ ಬೆಂಕಿಯಲ್ಲ, ಇಡೀ ಸಮಾಜ್, ದೇಶದಲ್ಲಿ ದರೋಡೆ ಆಗುತ್ತಿದೆ. ನಿಮಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ, ಬಿಜೆಪಿಯಿಂದ ಮುಕ್ತವಾಗಬೇಕಾದರೆ, ಕಿತ್ತೊಗೆಯಬೇಕು.
2013ರಿಂದ 2018ರವರೆಗೆ ನಮ್ಮ ಸರ್ಕಾರ ಇತ್ತು, ಜನ ಈಗ ನಿಮ್ಮ ಸರ್ಕಾರದಲ್ಲಿ ಸುವರ್ಣಯುಗವಿತ್ತು ಎಂದು ಹೇಳುತ್ತಿದ್ದಾರೆ. ಮತ್ತೆ ಆ ಸುವರ್ಣ ಯುಗ ಬೇಕಾದರೆ, ಬಿಜೆಪಿಯನ್ನು ಒದ್ದು ಒಡಿಸಿ. ನಮ್ಮ ಕಾರ್ಯಕರ್ತರು ಅದಕ್ಕೆ ಪ್ರೇರಕರಾಗಿರಬೇಕು. ಜನರನ್ನು ಜಾಗೃತಿಗೊಳಿಸಬೇಕು. ನಿಮ್ಮ ಮನೆಗೆ ಬಿಜೆಪಿ ಬೆಂಕಿ ಹಾಕಿದೆ. ನಾವೆಲ್ಲರೂ ಸೇರಿ ಈ ಬೆಂಕಿ ಆರಿಸೋಣ ಎಂದು ಮನವಿ ಮಾಡುವ ಕೆಲಸ ಮಾಡಬೇಕಿದೆ. ಅದಕ್ಕಾಗಿ ಈ ಹೋರಾಟ ಪ್ರಾರಂಭವಾಗಿದ್ದು, ನಿರಂತರವಾಗಿ ಮುಂದುವರಿಯಲಿದೆ.
ಇನ್ನು ರಾಗಿ ವಿಚಾರ. ಈ ವರ್ಷ 15 ಲಕ್ಷ ಮೆಟ್ರಿಕ್ ಟನ್ ರಾಗಿ ಬೆಳೆಯಲಾಗಿದೆ. ಪ್ರತಿ ಕ್ವಿಂಟಾಲ್ ಗೆ 3370 ರೂ. ಬೆಂಬಲ ಬೆಲೆ ನೀಡುತ್ತೇವೆ ಎಂದಿದ್ದಾರೆ. ಕೇಂದ್ರ ಸರ್ಕಾರ 2.1 ಲಕ್ಷ ಮೆ.ಟನ್ ಮಾತ್ರ ಖರೀದಿ ಮಾಡುತ್ತೇವೆ ಎಂದಿದ್ದಾರೆ. ಅದಕ್ಕೆ ನಾನು ರೈತರು ಬೆಳೆದಿರುವುದರಲ್ಲಿ ಶೇ.50ರಷ್ಟಾದರೂ ಖರೀದಿ ಮಾಡಿ, ಉಳಿದ ಶೇ.50ರಷ್ಟನ್ನು ಮನೆಯಲ್ಲಿ ಊಟಕ್ಕೆ ಬಳಸಿಕೊಳ್ಳುತ್ತಾರೆ ಎಂದು ಹೇಳಿದೆ. ರೈತರು ಮಾರುಕಟ್ಟೆ ಬೆಲೆಗೂ ಬೆಂಬಲ ಬೆಲೆಗೂ ಒಂದೂವರೆ ಸಾವಿರ ವ್ಯತ್ಯಾಸವಿದೆ. ಇನ್ನು ಭತ್ತ, ಜೋಳ, ತೊಗರಿ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಮೋದಿ ಅರು ಹೇಗೆ ಆದಾಯ ದುಪ್ಪಟ್ಟು ಮಾಡುತ್ತೀರಿ? ರತರು ಬೆಳೆದಿದ್ದನ್ನು ಖರೀದಿ ಮಾಡಿ. ನಮ್ಮ ಸರ್ಕಾರ ಇದ್ದಾಗ ರೈತರು ಅಪಾರ ಪ್ರಮಾಣದಲ್ಲಿ ಮೆಕ್ಕೆ ಜೋಳ ಬೆಳೆದರು. ಆಗ ನಮ್ಮ ಸರ್ಕಾರ ಎಲ್ಲ ಮೆಕ್ಕೆ ಜೋಳವನ್ನು ಖರೀದಿ ಮಾಡಿತ್ತು. ತೊಗರಿ ಬೆಳೆದಿದ್ದರು, ನಾನು 500 ರೂ. ಹೆಚ್ಚು ಕೊಟ್ಟು ಬೆಳೆದೆ. ಭತ್ತ ಬೆಳೆ ನಾಸವಾದಾಗ ಹೆಕ್ಟೋರ್ ಗೆ 25 ಸಾವಿರ ಕೊಟ್ಟೆ. ಇದು ನಮ್ಮ ಸರ್ಕಾರ. ನಾಶವಾಗುತ್ತಿರುವುದು ಬಿಜೆಪಿ ಸರ್ಕಾರ.
ನಾವು ಉಳುವವನೇ ಭೂಮಿಯ ಒಡೆಯ ಮಾಡಿದರೆ, ನೀವು ಉಳ್ಳವನೆ ಭೂಮಿಯ ಹೊಡೆಯ ಮಾಡಿದ್ದೀರಿ. ಈ ರೀತಿ ಆದರೆ ಬಡವರು ಉಳಿಯುತ್ತಾರಾ? ರಾಜ್ಯ ಈ ರೀತಿ ಹಾಳಾಗುತ್ತಿದೆ. ದಲಿತರು, ಹಿಂದುಳಿದವರು, ಮಹಿಳೆಯರು, ರೈತರನ್ನು ಹಾಳು ಮಾಡುತ್ತಿದ್ದೀರಿ. ಎಲ್ಲರ ಮನೆಗೂ ಬೆಂಕಿ ಬಿದ್ದೆ. ಈ ಬೆಂಕಿ ಆರಿಸುವ ಕೆಲಸ ಕಾಂಗ್ರೆಸ್ ಜವಾಬ್ದಾರಿ ಎಂದು ಕರೆ ನೀಡಿದರು.