ಜಗತ್ತು ನಾನಾ ತೊಂದರೆಗಳನ್ನು ಅನುಭವಿಸಿದಾಗ ಅಲ್ಲಲ್ಲಿ ಜನ್ಮವೆತ್ತುವ ಕೆಲವು ಧರ್ಮ ಪುರುಷರು ಆ ತೊಂದರೆಗಳಿಗೆ ಪರಿಹಾರ ನೀಡಿದ ಅನೇಕ ಉದಾಹರಣೆಗಳಿವೆ. ಭಗವಾನ್ ಆದಿನಾಥರಿಂದ ಹಿಡಿದು ಜೈನ ಧರ್ಮದ 24 ತೀರ್ಥಂಕರರು, ಭಗವಾನ್ ರಾಮ, ಕೃಷ್ಟ, ಮಹಮ್ಮದ್ ಪೈಗಂಬರ್, ಏಸುಕ್ರಿಸ್ತ ಮುಂತಾದವರು ಮನುಕುಲದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಜನರು ದಾರಿ ತಪ್ಪಿದಾಗ ಅವರನ್ನು ಸರಿ ದಾರಿಗೆ ತರಲು ಈ ಮಹನೀಯರುಗಳು ಧರ್ಮೋಪದೇಶ ಮಾಡಿದರು. ಅದರಂತೆ ನಡೆದುಕೊಂಡ ಜಗತ್ತು ಈ ಮಹನೀಯರುಗಳನ್ನು ದೇವರಂತೆ ಕಂಡು ಪೂಜಿಸಿ ತಮ್ಮ ಬದುಕನ್ನು ಸಾರ್ಥಕ್ಯಗೊಳಿಸಿಕೊಂಡರು. ಹಾಗಾಗಿ ಇಂದಿನವರೆಗೂ ಈ ಜಗತ್ತು ಈ ಮಹನೀಯರುಗಳನ್ನು ಅರಾಧಿಸಿ, ಅನುಕರಿಸಿ, ಅವರುಗಳ ಉಪದೇಶದಂತೆ ನಡೆದುಕೊಂಡು ಬರುತ್ತಾ ಇದೆ. ಹಾಗಾಗಿ ಈ ಜಗತ್ತು ಉಳಿದಿದೆ ಮತ್ತು ನೆಮ್ಮದಿಯಿಂದ ಇದ್ದೇವೆ ಎಂದು ಈ ಜಗತ್ತು ಭಾವಿಸಿದೆ. ಈ ಮಹನೀಯರುಗಳು ಗತಿಸಿ ಸಹಸ್ರ ಸಹಸ್ರ ಯುಗಗಳೇ ಗತಿಸಿರಲಿ ಅವರ ಆದರ್ಶ, ಅವರ ಚಾರಿತ್ರ, ಅವರ ಉಪದೇಶ ಚಿರಸ್ಥಾಯಿಯಾಗಿದೆ. ಕೋಟ್ಯಾಂತರ ಜನಗಳು ಇಂದಿಗೂ ಈ ಧಾರ್ಮಿಕ ಸಂತರನ್ನು ಅನುಕರಣೆ ಮಾಡುತ್ತಲೇ ಬಂದಿದೆ. ಇಂತಹಾ ಧಾರ್ಮಿಕ ಕ್ರಾಂತಿಯನ್ನು ಮೂಡಿಸಿ ಜಗತ್ತಿನಲ್ಲಿ ಶಾಂತಿಯ ಝರಿಯನ್ನು ಹರಿಸಿದವರಲ್ಲಿ ಪ್ರಮುಖರಾದವರು ಜೈನ ಧರ್ಮದ 24 ನೆಯ ತೀರ್ಥಂಕರ ಭಗವಾನ್ ಮಹಾವೀರ.
ಜೈನ ಧರ್ಮದ ನಂಬಿಕೆಯಂತೆ ಒಂದೊಂದು ಕಾಲಚಕ್ರದಲ್ಲೂ 24 – 24 ತೀರ್ಥಂಕರರು ಜನಿಸುತ್ತಾರೆ. ಇವರೆಲ್ಲರೂ ಪ್ರಾರಂಭದಲ್ಲಿ ರಾಜ್ಯಾಭಾರವನ್ನು ಮಾಡಿ ಪ್ರಜೆಗಳನ್ನು ಉತ್ತಮ ರೀತಿಯಲ್ಲಿ ಆಳಿದವರಾಗಿರುತ್ತಾರೆ. ಯಾವುದೋ ನಿಮಿತ್ತದ ಕಾರಣದಿಂದಾಗಿ ರಾಜ್ಯಾಭಾರವನ್ನು ತ್ಯಜಿಸಿ ಸೂಕ್ತ ಉತ್ತರಾಧಿಕಾರಿಯನ್ನು ನೇಮಿಸಿ ಅವರಿಗೆ ರಾಜ್ಯಾಭಾರವನ್ನು ವಹಿಸಿ ಕಾನನಕ್ಕೆ ತಪಸ್ಸಿಗೆ ಹೊರಡುತ್ತಾರೆ. ಅಂತರಂಗ, ಬಹಿರಂಗ ತಪದ ಮೂಲಕ ಶುಕ್ಲ ಧ್ಯಾನಗೈದು ಕೇವಲಜ್ಞಾನ ಪ್ರಾಪ್ತಿಮಾಡಿಕೊಂಡು ಅರಿಹಂತರಾಗುತ್ತಾರೆ. ಜಿನನಾಗಿ ( ಜಿನ – ಎಲ್ಲವನೂ ಗೆದ್ದವನು ) ಸಮವಸರಣದಲ್ಲಿ ಧರ್ಮೋಪದೇಶ ಮಾಡುತ್ತಾ ತನ್ನ ಆಯುವಿನ ಕೊನೆಯಲ್ಲಿ ಸಂಪೂರ್ಣ ಕರ್ಮಗಳನ್ನು ನಾಶ ಮಾಡಿ ಮೋಕ್ಷ ಪದವಿಯನ್ನು ಪಡೆಯುತ್ತಾರೆ.
ವರ್ತಮಾನದ ಕಾಲಚಕ್ರದಲ್ಲಿ ಮೊದಲ ತೀರ್ಥಂಕರರಾಗಿ ಭಗವಾನ್ ಆದಿನಾಥರು ಮನುಜ ಬದುಕುವ ಸಂದೇಶ ನೀಡಿ ಮೋಕ್ಷವನ್ನು ಪಡೆಯುತ್ತಾರೆ. ತದನಂತರ 22 ತೀರ್ಥಂಕರರೆಲ್ಲರೂ ಜನರಿಗೆ ಧರ್ಮೋಪದೇಶ ಮಾಡಿ ಮೋಕ್ಷ ಸೇರುತ್ತಾರೆ. ಈ ವರ್ತಮಾನದ ಕೊನೆಯ ( 24 ) ತೀರ್ಥಂಕರರೇ ಭಗವಾನ್ ಮಹಾವೀರ.
ಭಗವಾನ್ ಮಹಾವೀರರ ಧರ್ಮೋಪದೇಶ ಲಹರಿ
ಭರತ ಖಂಡದ ವ್ಯಾಪ್ತಿಗೆ ಒಳಪಟ್ಟ ಬಿಹಾರ ರಾಜ್ಯದ ಕುಂಡಲಪುರದಲ್ಲಿ ರಾಜಾ ಸಿದ್ಧಾರ್ಥ ರಾಜ್ಯವಾಳುತ್ತಿದ್ದ. ಈತನ ಮಡದಿ ತ್ರಿಶಲಾ ದೇವಿ ಧರ್ಮಾನುರಾಗಿಯಾಗಿ ರಾಜ ವೈಭೋಗದಲ್ಲಿ ಸಮರಸದಿಂದ ಇದ್ದಳು. ಇವಳ ಪುಣ್ಯ ಗರ್ಭದಲ್ಲಿ ಕ್ರಿ. ಪೂ 599 ರಲ್ಲಿ ಮಹಾವೀರನ ಜನನವಾಯಿತು. ಮಹಾವೀರನ ಜನನದ ಅತಿಶಯದಿಂದಾಗಿ ಕುಂಡಲಪುರ ಮತ್ತಷ್ಟೂ ವೈಭೋಗವನ್ನು ಪಡೆಯಿತು. ಬಾಲಕ ಮಹಾವೀರನ ಬಾಲ್ಯ ಚೇತೋಹಾರಿಯಾಗಿತ್ತು. ಕೈಗೊಂದು ಕಾಲಿಗೊಂದು ಆಳು, ಸಿರಿವಂತಿಕೆ ಅರಮನೆಯಲ್ಲಿ ಪವಡಿಸಿತ್ತು. ಭೋಗ ಭಾಗ್ಯಗಳು ಮಹಾವೀರನ್ನು ಕೈ ಬೀಸಿ ಕರೆಯುತ್ತಿತ್ತು. ಬಾ ನನ್ನನ್ನು ಬಳಸಿಕೋ ಎಂದು ಆಹ್ವಾವೀಯುತ್ತಿತ್ತು. ಆದರೆ ಮಹಾವೀರ ಪ್ರೌಢನಾಗುತ್ತಾ ಬಂದಂತೆ ಈ ಸುಖಭೋಗಗಳು ಸಂಕೋಲೆಯಂತೆ ಕಂಡವು. ಪ್ರಜಾ ಜನರೆಲ್ಲ ಸುಖ ಸಂತೋಷದಿಂದ ಇರುವಂತೆ ಕಂಡರೂ ಏನೋ ಕೊರತೆಯಿಂದ ಬಳಲುತ್ತಿರುವಂತೆ ಕಂಡಿತು. ಅರಮನೆ ಏಕೋ ಸೆರೆಮನೆಯಂತೆ ಭಾಸವಾಗತೊಡಗಿತು. ತನ್ನ ಸುತ್ತ ಮುತ್ತ ಇರುವ ಸುಖಭೋಗಗಳು , ರಾಜ ವೈಭವವನ್ನು ಸವಿಯುತ್ತಿದ್ದರೂ ಏನೋ ಒಂದು ಬೇರೆಯೇ ರೀತಿಯ ಸುಖ ಬೇಕು ಬೇಕು ಅನ್ನಿಸತೊಡಗುತ್ತಿತ್ತು. ಮಾತಾ ಪಿತರು ಮಹಾವೀರನ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದರೆ ಮಹಾವೀರ ಮಾತ್ರ ಅದೇನೋ ಜಹುಡುಕಾಟದ ಅಪೇಕ್ಷೆಯಿಂದ ಅರಮನೆಯಿಂದ ಹೊರನಡೆದ. ವೈರಾಗ್ಯ ತುಂದಿಲನಾಗಿ ಸಕಲ ಪರಿಗ್ರಹಗಳ ತೊರೆಯುತ್ತಾ ಆತ್ಮ ಸ್ವರೂಪ ಅರಿಯಲು ದಟ್ಟ ಕಾನನಕ್ಕೆ ತೆರಳಿದ. ತನ್ನನ್ನು ತಾನು ಅರಿಯಲು ಬಹಿರಂಗ ಹಾಗೂ ಅಂತರಂಗ ತಪದ ಮೊರೆಹೋದ. ಆರ್ತ್ರ ಧ್ಯಾನ, ರೌದ್ರ ಧ್ಯಾನಗಳ ಹತ್ತಿರ ಸುಳಿಯದೇ ಧರ್ಮಧ್ಯಾನದಿಂದ ಮುಂದುವರಿದು ಶುಕ್ಲ ಧ್ಯಾನದ ಮೊರೆಹೊಕ್ಕಾಗ ಘಾತಿ ಕರ್ಮಗಳ ನಾಶವಾದಾಗ ಕೇವಲ ಜ್ಞಾನ ಪ್ರಾಪ್ತಿಯಾಯಿತು. ಜಗದ ಸಕಲ ವಿಚಾರಗಳು ಕೇವಲಜ್ಞಾನದಲ್ಲಿ ಗೋಚರವಾಯಿತು. ಸಮವಸರಣ( ಧರ್ಮ ಸಭೆ ) ವನ್ನು ಸೇರಿ ಧರ್ಮೋಪದೇಶ ಮಾಡಲಾರಂಭಿಸಿದರು.
ಭಗವಾನ್ ಮಹಾವೀರರ ಧರ್ಮೋಪದೇಶ
ಬದುಕು ಬದುಕಲು ಬಿಡು ಎಂಬ ಪ್ರಧಾನ ಉಪದೇಶ ಸರ್ವರ ಹೃನ್ಮನಗಳನ್ನು ತಲುಪಿತು. ನೀನು ಖಂಡಿತವಾಗಿಯೂ ಬದುಕಬೇಕು, ಅದು ನಿನ್ನ ಹಕ್ಕು ಕೂಡ. ನೀನು ಚೆನ್ನಾಗಿ ಬದುಕು. ಆದರೆ ನೀನು ಬದುಕುವ ಭರಾಟೆಯಲ್ಲಿ ನಿನ್ನಂತೆ ಚೆನ್ನಾಗಿ ಬದುಕಬೇಕೆಂದಿರುವವರ ಹಕ್ಕಿಗೆ ಸಂಚಕಾರ ತರಬೇಡ. ಯಾಕೆಂದರೆ ಅವರಿಗೂ ನಿನ್ನಂತೆಯೇ ಬದುಕುವ ಹಕ್ಕಿದೆ. ಇತರರ ಬದುಕಿಗೆ ನೋವ ಕೊಡದೇ, ಸಾಧ್ಯವಾದರೆ ಇತರರ ಬದುಕಿಗಿರುವ ಹಕ್ಕಿಗೆ ಪೂರಕವಾಗಿ ನಿನ್ನ ಜೀವನವಿರಲಿ. ಹಾಗೆಯೇ ನಿನ್ನ ಜೀವನವು ಅಹಿಂಸಾಮಯವಾಗಿರಲಿ, ಹಿಂಸೆಯ ಮೂಲಕ ನಿನ್ನ ಬದುಕಿನ ಸಾರ್ಥಕ್ಯವನ್ನು ಕಾಣಬೇಡ. ಯಾಕೆಂದರೆ ನೀನು ಹಿಂಸೆಯ ಮೂಲಕ ಗಳಿಸಬಹುದಾದ ಯಶಸ್ಸು ನಿನ್ನ ಅಧಃಪತನದ ಸಂಕೇತವಾಗಿರುತ್ತದೆ. ಮನ ವಚನ ಕಾಯದ ಮೂಲಕವೂ ನೀನು ಹಿಂಸೆಯ ಯೋಚಿಸಬೇಡ, ಯಾಕೆಂದರೆ ಹಿಂಸೆಯ ಮೂಲಕ ನೀನು ವಿಜ್ರಂಭಿಸುವುದಾದರೆ ನೀನು ಪಾಪಗಳ ಚೀಲವನ್ನು ಭರ್ತಿ ಮಾಡಿಕೊಳ್ಳುತ್ತಿರುವಿ , ಇದರಿಂದ ನೀನು ನರಕಲೋಕದ ನಿವಾಸಿಯಾಗುವೆ.
ನಿನ್ನ ಬದುಕಿಗೆ ಎಷ್ಟು ಪರಿಕರಗಳ, ಸಂಪತ್ತಿನ ಅವಶ್ಯಕತೆಯಿದೆಯೋ ಅಷ್ಟನ್ನೇ ಸಂಗ್ರಹಿಸು ಅಥವಾ ಇಟ್ಟುಕೋ. ಯಾಕೆಂದರೆ ಮಿತಿ ಮೀರಿದ ಸಂಪತ್ತಿನ ಸಂಗ್ರಹಣೆಗೆ ನೀನು ಹೊರಟುವಿಯಾದರೆ ಖಂಡಿತವಾಗಿಯೂ ಸಂಪತ್ತಿನ ಸಂಗ್ರಹಣೆಗೆ ವಾಮ ಮಾರ್ಗವನ್ನು ಹಿಡಿಯುತ್ತಿ. ವಾಮಮಾರ್ಗವೆಂದರೆ ಅದು ಸಾತ್ವಿಕವಲ್ಲದ ಪಥವಾಗಿದ್ದು ಅದು ಮೋಸ, ವಂಚನೆ, ಹಿಂಸೆಯ ಮೆಟ್ಟಿಲುಗಳಾಗುತ್ತಿರುತ್ತದೆ. ತೃಪ್ತಿಯಿಲ್ಲದೇ ನೀನು ಕ್ಷೋಭೆಯಿಂದ ಮತಿವಿಕಲನಾಗಿ ಸಮಾಜ ಕಂಟಕನಾಗುವುದರಲ್ಲಿ ಸಂಶಯವಿಲ್ಲ. ಸಂಪತ್ತಿನ ಹೆಚ್ಚುವರಿ ಸಂಗ್ರಹಣೆಯ ಆಸೆ ಇಲ್ಲದೇ ಹೋದಲ್ಲಿ ನೆಮ್ಮದಿಯ ಜೀವನ ನಿನ್ನದಾಗುತ್ತದೆ. ಲಾಲಸೆ ರಹಿತ ಜೀವನ ಕುಶಿಯನ್ನು ಹಾಗೂ ಮಾನಸಿಕ ಸಮತೋಲವನ್ನು ಉಂಟು ಮಾಡುತ್ತದೆ.
ಒಬ್ಬರ ಸಂತೋಷದ ಜೀವನ , ಸಮರಸದ ಜೀವನವನ್ನು ಕಂಡರೆ ಉರಿ ಪಡಬೇಡ. ಉರಿಯ ಪಟ್ಟರೆ ನೀನೇ ಉರಿದು ಹೋಗುವೆ. ಮತ್ಸರವು ಹಾಲಾಹಲ ವಿಷವಾಗಿದ್ದು ಅದು ನಿನ್ನ ಒಡಲನ್ನು ಸುಟ್ಟು ಬೂದಿ ಮಾಡುತ್ತದೆ.
ಸಕಲ ಪ್ರಾಣಿಗಳಲ್ಲಿ ದಯೆಯ ಭಾವ ಇರಲಿ. ಲೋಕದಲ್ಲಿ ಎಲ್ಲರ ಬದುಕು ಒಂದೇ ತೆರನಾಗಿ ಇರುವುದಿಲ್ಲ. ಹಲವು ಜೀವಿಗಳು ದುಃಖದಲ್ಲಿರುತ್ತವೆ, ಹಲವು ಜೀವಿಗಳು ಸಂತೋಷದಿಂದ ಇರುತ್ತವೆ. ದುಃಖ ಪಡುತ್ತಿರುವ ಜೀವಿಗಳಲ್ಲಿ ದಯಾ ಭಾವವನ್ನು ತೋರು, ಅವುಗಳ ಬದುಕಿಗೆ ಆಸರೆಯಾಗು ಅಥವಾ ನೆರಳಾಗು. ನಿನ್ನ ದಯಾ ಭಾವದ ನಿಮಿತ್ತದಿಂದ ದುಃಖ ಪಡುತ್ತಿರುವ ಪ್ರಾಣಿ ಸಂತೋಷವನ್ನು ಪಡೆಯಬಹುದು. ಸಕಲ ಚರಾಚರ ಜೀವಿಗಳ ಒಳಿತನ್ನು ಪ್ರತಿಯೊಬ್ಬರು ಬಯಸಬೇಕು ಹಾಗೂ ಅದರಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು
ರಾಗ ದ್ವೇಷಗಳು ಮನಸ್ಸಿನ ವಿಕಾರೀ ಭಾವಗಳಾಗಿವೆ. ಪ್ರೀತಿ ಪ್ರೇಮ ನಿನ್ನಾತ್ಮನ ಗುಣವಾಗಿದೆ. ಸಹಜ ಗುಣದ ವಿರುದ್ಧವಾಗಿ ಮಗದೊಂದು ಜೀವಿಯ ಮೇಲೆ ದ್ವೇಷವನ್ನು ಸಾಧಿಸುವುದು ನಿನ್ನ ಮನೋವಿಕಾರದ ಸೂಚಕವಾಗಿದೆ. ದ್ವೇಷವೆಂಬ ವಿಷ ಮನಸ್ಸು ಮನಸ್ಸನ್ನು, ಮನುಷ್ಯ ಮನುಷ್ಯನನ್ನು , ಪಟ್ಟಣಕ್ಕೆ ಪಟ್ಟಣವನ್ನು, ರಾಜ್ಯ ರಾಜ್ಯವನ್ನು, ದೇಶ ದೇಶವನ್ನು ಸುಟ್ಟು ಹಾಕುತ್ತದೆ. ಮಾನವೀಯತೆಯ ಸೆಲೆಯನ್ನು ಬರಿದಾಗಿಸಿ , ಭಾವನೆಗಳನ್ನು ಸುಟ್ಟು ಹಾಕಿ ಜಗದ ತುಂಬಾ ಅಂಧಕಾರ ಕವಿಯುವಂತೆ ಮಾಡುವ ದ್ವೇಷ ಭಾವನೆಯನ್ನು ತೊರೆದು ಜಗದಗಲ ಪ್ರೀತಿಯ ಸೆಲೆ ಒಸರುವಲ್ಲಿ ನೀನು ನಿಮಿತ್ತನಾಗು , ಕಾರಣನಾಗು.
ಮಹಾವೀರ ವಾಣಿಯಿಂದಾಯಿತು ಜಗ-ಸುಂದರ
ಭಗವಾನ್ ಮಹಾವೀರ ವಾಣಿಯನ್ನು ಆಲಿಸಿದ ಭವ್ಯ ಜನತೆ ಆನಂದ ತುಂದಿಲರಾದರು. ಸತ್ಪಥದ ದಾರಿಯಲ್ಲಿ ಮುನ್ನಡೆದು ಬದುಕ ಕಟ್ಟಲು ಆ ದಿಸೆಯತ್ತ ಹಲವರು ಸಾಗಿದರು. ಅಹಿಂಸೆಯೇ ಪರಮ ಧರ್ಮ ಎಂದರಿತರು. ಅಹಿಂಸೆಯ ಉದ್ಯಾನವನದಲ್ಲಿ ಅಡ್ಡಾಡಿ ದಯಾಮಯಿಗಳಾದರು. ಅತೀ ಪರಿಗ್ರಹ ಸಂಪತ್ತುಗಳತ್ತ ಮನ ಸೋಲದೇ ಅಪರಿಗ್ರಹಿಳಾದರು. ದಾನ, ಧರ್ಮ, ಕರುಣೆಗಳ ತೋಟವನ್ನು ನಿರ್ಮಿಸಿ ಅದರಿಂದಾದ ಸಂತೋಷವೆಂಬ ಫಸಲನ್ನು ಸವಿಯುತ್ತಾ ಸಂಭ್ರಮ ಪಟ್ಟರು. ಬದುಕು ಬದುಕಲು ಬಿಡು ಎಂಬುದನ್ನು ಕರಗತ ಮಾಡಿಕೊಂಡು ಪಾಪದಿಂಚ ವಂಚಿತರಾಗಿ ಮಹಾವೀರನಾಗುವತ್ತ ಹೆಜ್ಜೆ ಹಾಕಿದರು.
-ನಿರಂಜನ್ ಜೈನ್ ಕುದ್ಯಾಡಿ