ಭದ್ರಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ಯಾಗಿ ಘೋಷಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿರಿಗೆರೆಯಲ್ಲಿ ಬುಧವಾರ ಸಂಜೆ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಸದ್ಧರ್ಮ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಹೈ ಪವರ್ ಕಮಿಟಿ ಈ ತೀರ್ಮಾನ ಕೈಗೊಂಡಿದ್ದು, 12,500 ಕೋಟಿ ರೂ. ಅನುದಾನ ಭದ್ರಾ ಮೇಲ್ದಂಡೆ ಯೋಜನೆಗೆ ಸಿಗಲಿದೆ ಎಂದರು. ಮೈಸೂರಿನ ಮಹಾರಾಜರು ನಿರ್ಮಿಸಿದ ಚಿತ್ರದುರ್ಗದ ವಾಣಿವಿಲಾಸ ಸಾಗರಕ್ಕೆ ನೀರು ಹರಿಯುವ ಎಲ್ಲ ದಾರಿಗಳನ್ನು ಬಂದ್ ಮಾಡಲಾಗಿತ್ತು. ವಿವಿ ಸಾಗರ ಭರ್ತಿಯಾದರೆ ಮಧ್ಯ ಕರ್ನಾಟಕದ ಹಳ್ಳಿ ಹಳ್ಳಿಗೂ ನೀರು ಕೊಡಬಹುದು ಎನ್ನುವುದು ನನ್ನ ಅಭಿಪ್ರಾಯವಾಗಿತ್ತು. ಈಗ ಭದ್ರಾ ಮೇಲ್ದಂಡೆಯಿಂದ ವಿವಿ ಸಾಗರಕ್ಕೆ ನೀರು ಹರಿಸಲಾಗುತ್ತಿದೆ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ಅನುಷ್ಟಾನದ ಹೊಣೆಯನ್ನು ಬಿ. ಎಸ್. ಯಡಿಯೂರಪ್ಪ ನನಗೆ ನೀಡಿದ್ದರಿಂದಲೇ ಇಂದು ಯೋಜನೆ ಜಾರಿಯಾಗುತ್ತಿದೆ. ಅವರು ಬಹಳಷ್ಟು ವಿರೋಧದ ನಡುವೆಯೂ ದಿಟ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯು ಏಕೈಕ ರಾಷ್ಟ್ರೀಯ ಯೋಜನೆಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಮಧ್ಯಕರ್ನಾಟಕದ ನೀರಾವರಿ ಯೋಜನೆಗೆ ತುಂಬಾ ಸಹಕಾರಿಯಾಗಿದ್ದು, ಇದರಿಂದ ಅಂತರ್ಜಲ ಹೆಚ್ಚಳದ ಜೊತೆಗೆ ನೀರನ್ನು ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.