ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ಬಿಸಿಸಿಐ ನೇಮಕ ಮಾಡಿದೆ.
ನಾಯಕ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಬಳಿಕ ಏಕದಿನ, ಟಿ–20 ತಂಡದ ಸಾರಥ್ಯ ವಹಿಸಿದ್ದ ಶರ್ಮಾಗೆ ಇದೀಗ ಟೆಸ್ಟ್ ನಾಯಕನ ಹೊಣೆಯನ್ನೂ ನೀಡಲಾಗಿದೆ. ಮಾರ್ಚ್ 4ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸುವ ಮೂಲಕ ರೋಹಿತ್ ಶರ್ಮಾ, ಟೆಸ್ಟ್ ನಾಯಕತ್ವವನ್ನು ಆರಂಭಿಸಲಿದ್ಧಾರೆ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ತಿಳಿಸಿದ್ದಾರೆ.
ರೋಹಿತ್ ಶರ್ಮಾ ನಮ್ಮ ದೇಶದ ನಂಬರ್ ಒನ್ ಕ್ರಿಕೆಟ್ ಆಟಗಾರರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ವಿರಾಟ್ ಕೊಹ್ಲಿ ಟಿ–20 ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಬಳಿಕ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ನಂತರ, ಇದೇ ಜನವರಿಯಲ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ಕೊಹ್ಲಿ ತೊರೆದಿದ್ದರು.