ದೇಶದಲ್ಲಿ ದೊಡ್ಡ ವ್ಯಕ್ತಿಗಳ ಆರ್ಥಕ ಅಪರಾಧಗಳು ಹೆಚ್ಚುತ್ತಿವೆ. ಅಲ್ಲದೇ, ಸಾವಿರಾರು ಕೋಟಿ ರೂ.ಗಳ ಬ್ಯಾಂಕ್ ಸಾಲ ವಂಚನೆಯ ಪ್ರಕರಣಗಳು ಕೆಲ ವರ್ಷಗಳಲ್ಲಿ ಕೇಳಿಬರುತ್ತಿವೆ. ಇದೀಗ, ಅಂತಹುದೇ ಪ್ರಕರಣ ಹೊರಬಂದಿದೆ.
ಇದುವರೆಗಿನ ದೇಶದ ಅತಿ ದೊಡ್ಡ ಬ್ಯಾಂಕ್ ವಂಚನೆಯ ಪ್ರಕರಣ ಇದಾಗಿದೆ. ಗುಜರಾತ್ನ ಎಬಿಜಿ ಸಿಪ್ ಯಾರ್ಡ್ನ ಮಾಲೀಕ ರಿಷಿ ಅಗರ್ವಾಲ್ ದೇಶದ ಹಲವು ಬ್ಯಾಂಕ್ಗಳಲ್ಲಿ ಬರೋಬ್ಬರಿ 23 ಸಾವಿರ ಕೋ.ರೂ. ಸಾಲ ಪಡೆದು ವಂಚನೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಬಿಜೆಪಿ ಸಂಸದ ವರುಣ್ ಗಾಂಧಿ ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಟ್ವೀಟ್ ಮಾಡಿರುವ ಅವರು, ವಿಜಯ್ ಮಲ್ಯ 9000 ಕೋಟಿ, ನೀರವ್ ಮೋದಿ 14000 ಕೋಟಿ ಹಾಗೂ ರಿಷಿ ಅಗರ್ವಾಲ್ 23000 ಕೋಟಿ.
ಇಂದು ದೇಶದಲ್ಲಿ ಪ್ರತಿನಿತ್ಯ ಸುಮಾರು 14 ಮಂದಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಇಂತಹ ಹಣವಂತರ ಬದುಕು ವೈಭವದ ಉತ್ತುಂಗದಲ್ಲಿದೆ. ಈ ಸೂಪರ್ ಭ್ರಷ್ಟ ವ್ಯವಸ್ಥೆಯ ಮೇಲೆ ‘ಬಲವಾದ ಸರ್ಕಾರ’ ‘ಬಲವಾದ ಕ್ರಮ’ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ತಮ್ಮದೇ ಸರ್ಕಾರದ ವಿರುದ್ಧ ವರುಣ್ ಗಾಂಧಿ ಕಿಡಿಕಾರಿದ್ದಾರೆ.
ಇನ್ನು, ಗುಜರಾತ್ನ ಎಬಿಜಿ ಸಿಪ್ಯಾರ್ಡ್ನ ಮಾಲೀಕ ರಿಷಿ ಅಗರ್ವಾಲ್ ಭಾರತದ ಪೌರತ್ವ ತೊರೆದು ಈಗಾಗಲೇ ಸಿಂಗಾಪುರದ ಪೌರತ್ವ ಪಡೆದುಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸಿಬಿಐ ಗೆ ಕಳೆದ ಒಂದೂವರೆ ವರ್ಷದ ಹಿಂದೆಯೇ ದೂರು ದಾಖಲಿಸಿತ್ತು. ಆದರೆ, ಇದೀಗ ಕೆಲ ದಿನಗಳ ಹಿಂದೆ ಈ ಪ್ರಕರಣ ಹೊರ ಬಿದ್ದಿದೆ.