ದಿನಾಂಕ 30.01.2022 ರ ಭಾನುವಾರದಂದು ಬಜಿಲಕೇರಿ ಭಗವಾನ್ ಶ್ರೀ 1008 ಆಧಿನಾಥ ಜಿನ ಮಂದಿರದಲ್ಲಿ ಶಾಂತಿ ಚಕ್ರ ಯಂತ್ರಾರಾಧನೆ ವೈಭವದಿಂದ ನಡೆಯಿತು.
ಪ್ರಜ್ಞಾಶ್ರಮಣ ಆಚಾರ್ಯರತ್ನ ೧೦೮ ದೇವನಂದಿ ಮುನಿಮಹಾರಾಜರ ಪರಮ ಶಿಷ್ಯರಾದ ಯುಗಲ ಮುನಿಗಳೆಂದೇ ಪ್ರಸಿದ್ಧಿ ಪಡೆದಿರುವ ಪರಮ ಪೂಜ್ಯ ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜ್ ಮತ್ತು ಪರಮಪೂಜ್ಯ ಮುನಿಶ್ರೀ 108 ಅಮರಕೀರ್ತಿ ಮಹಾರಾಜ್ ರವರ ಪಾವನ ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಭ. ಶಾಂತಿನಾಥ ತೀರ್ಥಂಕರರ ಶಾಂತಿಚಕ್ರ ಆರಾಧನೆ ವೈಭವದಿಂದ ನಡೆಯಿತು.
ಮಂಗಳೂರಿನ ಸಮಸ್ತ ಶ್ರಾವಕ ಶ್ರಾವಕಿಯರು ಪೂಜೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಸಂಪನ್ನಗೊಳಿಸಲಾಯಿತು. ಜಿನಗಾನವಿಶಾರದೆ ಜಯಶ್ರೀ ದರಣೇಂದ್ರ ಹೊರನಾಡು ಇವರ ಸುಶ್ರಾವ್ಯ ಸಂಗೀತದೊಂದಿಗೆ ನಡೆದ ಪೂಜೆಯ ಬಳಿಕ ಯುಗಲ ಮುನಿಮಹಾರಾಜರಿಂದ ಮಂಗಲ ಪ್ರವಚನವನ್ನು ನಡೆಸಲಾಯಿತು.
ಅಮೋಘ ಕೀರ್ತಿ ಮಹಾರಾಜ್ ಹಾಗೂ ಅಮರಕೀರ್ತಿ ಮಹಾರಾಜ್ ಮುನಿಗಳು ಮೂಲತಃ ಗುಜರಾತಿನವರಾಗಿದ್ದು , 15 ವರ್ಷಗಳಿಂದ ದಿಗಂಬರ ಮುನಿಗಳಾಗಿ ದೀಕ್ಷೆ ಪಡೆದು ಕಾಲ್ನಡಿಗೆಯಲ್ಲೇ ದೇಶ ಸಂಚಾರ ಮಾಡುತ್ತಿದ್ದಾರೆ. ಮುನಿಗಳ ಮಾತೃಭಾಷೆ ಗುಜರಾತಿ ಆದರೂ ಕನ್ನಡವನ್ನು ಕಲಿತು ಕನ್ನಡದಲ್ಲಿ ಉಪದೇಶ ನೀಡುತ್ತಾರೆ.
ಈ ಭವ್ಯ ಕಾರ್ಯಕ್ರಮದಲ್ಲಿ ಬಸದಿಯ ಆಡಳಿತ ಮೊಕ್ತೇಸರರಾದ ಶ್ರೀ ಶೋಭಕರ ಬಲ್ಲಾಳ್ ಸಹೋದರರು, ಭಾರತೀಯ ಜೈನ್ ಮಿಲನ್ ವಲಯ 8 ಅಧ್ಯಕ್ಷರಾದ ವೀರ್ ಪುಷ್ಪರಾಜ್ ಜೈನ್ ಕಾರ್ಯಧರ್ಶಿಗಳಾದ ವೀರ್ ರಾಜೇಶ್ ಎಂ, ಮಂಗಳೂರು ಜೈನ್ ಮಿಲನ್ ಅಧ್ಯಕ್ಷರಾದ ವೀರ್ ಪ್ರಮೋದ್ ಜೈನ್, ಕಾರ್ಯದರ್ಶಿ ವೀರ್ ಮಹಾವೀರ್ ಪ್ರಸಾದ್ ಹಾಗೂ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಮಂಗಳೂರಿನ ಸಮಸ್ತ ಜೈನ ಭಾಂದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು.