ರಷ್ಯಾ ದಾಳಿಯಿಂದಾಗಿ ಉಕ್ರೇನ್ನಲ್ಲಿ ಸಿಲುಕಿರುವ ತನ್ನ ಮಗನ ಬಗ್ಗೆ ತೀವ್ರವಾಗಿ ಚಿಂತಿಸುತ್ತಿದ್ದ ತಾಯಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಪುದೂರಿನ ಶಶಿಕಲಾ ಮೃತ ತಾಯಿ. ಶಂಕರ್ ಮತ್ತು ಶಶಿಕಲಾ ದಂಪತಿಯ ಮಗ ಶಕ್ತಿವೆಲ್ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು, ಉಕ್ರೇನ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇತ್ತ ಮೊದಲೇ ಬಿಪಿ ಮತ್ತು ಡಯಾಬಿಟಿಸ್ನಿಂದ ಬಳಲುತ್ತಿದ್ದ ಶಶಿಕಲಾ ಉಕ್ರೇನ್ನಲ್ಲಿ ಯುದ್ಧ ಆರಂಭವಾದ ಬಳಿಕ ಮಗನ ಪರಿಸ್ಥಿತಿ ಬಗ್ಗೆ ತೀವ್ರವಾಗಿ ಚಿಂತಿಸುತ್ತಿದ್ದರಂತೆ.
ಫೆ.26 ರ ಸಂಜೆ ಅಸ್ವಸ್ಥರಾಗಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಹೊತ್ತಿನಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದಿ ವರದಿಯಾಗಿದೆ.
ಯುದ್ಧಪೀಡಿತ ದೇಶದಿಂದ ಸ್ವದೇಶಕ್ಕೆ ಬರಲು ಸಾಧ್ಯವಾಗದ ಮಗ ವೀಡಿಯೋ ಕರೆಯಲ್ಲೇ ಅಮ್ಮನ ಪಾರ್ಥಿವ ಶರೀರದ ದರ್ಶನ ಪಡೆದಿದ್ದು ಮನಕಲಕುವಂತಿತ್ತು.