ದೆಹಲಿ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಕೂಡ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿಯವರು, “2019ರ ಬಜೆಟ್ಗೂ ಮುನ್ನ ಆಮ್ ಆದ್ಮಿ ಪಾರ್ಟಿಯ ನಿಯೋಗವು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿತ್ತು. ನಮ್ಮ ಮನವಿಗೆ ಸ್ಪಂದಿಸಿದ್ದ ಯಡಿಯೂರಪ್ಪನವರು ಗಾರ್ಮೆಂಟ್ನಲ್ಲಿ ನೌಕರಿ ಮಾಡುವ ಮಹಿಳೆಯರಿಗೆ ಸೀಮಿತವಾಗುವಂತೆ 15 ಕೋಟಿ ರೂ. ಅನುದಾನದಲ್ಲಿ ಯೋಜನೆಯನ್ನು ಘೋಷಿಸಿದರು. ನಂತರದ ಬಜೆಟ್ಗಳಲ್ಲೂ ಅದನ್ನೇ ಮುಂದುವರಿಸಲಾಗಿದ್ದು, ಇನ್ನಾದರೂ ಎಲ್ಲ ಮಹಿಳೆಯರಿಗೆ ಯೋಜನೆಯನ್ನು ವಿಸ್ತರಿಸಬೇಕು” ಎಂದು ಆಗ್ರಹಿಸಿದರು.
ದೆಹಲಿಯ ಎಎಪಿ ಸರ್ಕಾರವು ಮಹಿಳೆಯರ ಪ್ರಯಾಣವನ್ನು ಸಂಪೂರ್ಣ ಉಚಿತ ಮಾಡಿದ್ದರಿಂದ, ಅಲ್ಲಿನ ಮಹಿಳೆಯರಿಗೆ ಹೆಚ್ಚು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ ಹಾಗೂ ಅವರ ಜೀವನಮಟ್ಟ ಸುಧಾರಿಸಿದೆ. ನಿರುದ್ಯೋಗಿ ಮಹಿಳೆಯರಿಗಂತೂ ಇದು ದೊಡ್ಡ ವರವಾಗಿದೆ. ದೆಹಲಿಯಲ್ಲಿ ಮಹಿಳಾ ಪ್ರಯಾಣಿಕರ ಪ್ರಮಾಣ ಏರಿಕೆಯಾಗಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದು ಮಹಿಳಾ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ” ಎಂದು ಕುಶಲಸ್ವಾಮಿ ಹೇಳಿದರು.
ಎಎಪಿಯ ಮುಖಂಡರಾದ ಉಷಾ ಮೋಹನ್ರವರು ಮಾತನಾಡಿ, “ರಾಜ್ಯದಲ್ಲಿ ಸಿಸಿಟಿವಿ ಅಳವಡಿಕೆಯು ನೆನೆಗುದಿಗೆ ಬಿದ್ದಿದೆ. ದೆಹಲಿ ಮಾದರಿಯಲ್ಲಿ ಎಲ್ಲೆಡೆ ಸಿಸಿಟಿವಿ ಅಳವಡಿಸಲು ಕ್ರಮ ಕೈಗೊಳ್ಳಬೇಕು. ನಿರ್ಭಯ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿದೆ. ನೊಂದ ಮಹಿಳೆಯರಿಗೆ ಅನುಕೂಲವಾಗುವಂತೆ ನಿರ್ಭಯ ಕೇಂದ್ರಗಳನ್ನು ಸಜ್ಜುಗೊಳಿಸಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಬೇಕು. ಬಸ್ ನಿಲ್ದಾಣಗಳಲ್ಲಿ ವ್ಯವಸ್ಥಿತವಾದ ನಿರ್ಭಯ ಕೇಂದ್ರಗಳನ್ನು ಆರಂಭಿಸಲು ಆದ್ಯತೆ ನೀಡಬೇಕು” ಎಂದು ಆಗ್ರಹಿಸಿದರು.