ಟಿಂಡರ್ ಆ್ಯಪ್ ಮೂಲಕ ಡೇಟಿಂಗ್ ನೆಪದಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಸುಲಿಗೆ ಮಾಡುತ್ತಿದ್ದ 33 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ನನ್ನು ಕೊಡಿಗೇಹಳ್ಳಿ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುಶಾಂತ್ ಜೈನ್ ಅಲಿಯಾಸ್ ಅಭಿಲಾಷ್ ಎಂದು ಗುರ್ತಿಸಲಾಗಿದೆ. ಈತ ಛತ್ತೀಸ್ಗಢ ಮೂಲದವನಾಗಿದ್ದು, ಪತ್ನಿ ಮತ್ತು ಮಕ್ಕಳೊಂದಿಗೆ ಎಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದಾನೆ. ನಗರದಲ್ಲಿ ವ್ಯಾಪಾರ ನಡೆಸುತ್ತಿರುವ ಈತ ಚಾರ್ಟರ್ಡ್ ಅಕೌಂಟೆಂಟ್ ಆಗಿಯೂ ಕೆಲಸ ಮಾಡಿಕೊಂಡಿದ್ದ.
ಆರೋಪಿ ಡೇಟಿಂಗ್ ಆ್ಯಪ್ ಮೂಲಕ ಕೊಡಿಗೇಹಳ್ಳಿ ವ್ಯಾಪ್ತಿಯ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು ಅವರ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಬಳಿಕ ಆಕೆಗೆ ಕರೆ ಹಾಗೂ ಮೆಸೇಜ್ ಮಾಡಿ ಪುಸಲಾಯಿಸಿ ಫೆ.1ರಂದು ಆಕೆಯ ಮನೆಗೆ ತೆರಳಿದ್ದ. ಬಳಿಕ ಆಕೆಯನ್ನು ವಿವಸ್ತ್ರಗೊಳಿಸಿ ಮೊಬೈಲ್ ನಲ್ಲಿ ಫೋಟೋಗಳನ್ನು ಸೆರೆ ಹಿಡಿದಿದ್ದ.
ಬಳಿಕ ಆ ಮಹಿಳೆ ಮೊಬೈಲ್’ಗೆ ಬೆತ್ತಲೆ ಫೋಟೋಗಳನ್ನು ಕಳುಹಿಸಿ, ಕರೆ ಮಾಡಿ ಲಕ್ಷಾಂತರ ರುಪಾಯಿ ಹಣಕ್ಕೆ ಬೇಡಿಕೆ ಇರಿಸಿದ್ದ. ಹಣ ಕೊಡದಿದ್ದಲ್ಲಿ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಸಂತ್ರಸ್ತೆ ದೂರು ನೀಡಿದ ಮೂರು ತಾಸಿನೊಳಗೆ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿ, ಆತನಿಂದ 3 ಮೊಬೈಲ್ ಫೋನ್, ರೂ.3.60 ಲಕ್ಷ ನಗದು ಜಪ್ತಿ ಮಾಡಿದ್ದಾರೆ.