ಪಂಜಾಬ್ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಶನಿವಾರ ಬೆಳಗ್ಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ನೂತನ ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.
ನಂತರ ರಾಜಭವನದಿಂದ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರನ್ನು ಭೇಟಿ ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು ನಮ್ಮ ಶಾಸಕರಿಗೆ ಬೆಂಬಲ ನೀಡುವಂತೆ ಕೇಳಿದ್ದೇನೆ. ಎಲ್ಲಿ ಪ್ರಮಾಣವಚನ ತೆಗೆದುಕೊಳ್ಳುತ್ತೀರಿ ಎಂದು ತಿಳಿಸಿ ಎಂದು ರಾಜ್ಯಪಾಲರು ಹೇಳಿದರು. ಬ್ರಿಟಿಷರ ವಿರುದ್ಧ ಹೋರಾಡಿ ಜೀವವನ್ನು ಬಲಿದಾನ ಮಾಡಿದ ಭಗತ್ ಸಿಂಗ್ ಅವರ ಹುಟ್ಟೂರು ಖಟ್ಕರ್ ಕಲನ್ ನಲ್ಲಿ ಮಾರ್ಚ್ 16ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದರು.
ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನ ಪಂಜಾಬ್ ನ ಜನತೆ ಭಾಗವಹಿಸಲಿದ್ದಾರೆ. ಭಗತ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಲಾಗುವುದು. ಉತ್ತಮ ಸಚಿವ ಸಂಪುಟ ರಚನೆ ಮಾಡಿ ಈ ಹಿಂದಿನ ಸರ್ಕಾರಗಳು ತೆಗೆದುಕೊಳ್ಳದಂತಹ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನೀವೆಲ್ಲಾ ಕಾದು ನೋಡಿ ಎಂದು ಭಗವಂತ್ ಮಾನ್ ಕುತೂಹಲ ಉಳಿಸಿಕೊಂಡರು.