ಅನರ್ಹಗೊಂಡಿದ್ದ ಅವಧಿ ಸೇರಿದಂತೆ 2013 ರಿಂದಲೂ ಮುನಿರತ್ನರವರು ರಾಜಾಜೇಶ್ವರಿ ನಗರದ ಶಾಸಕರಾಗಿ ಅಧಿಕಾರ ಚಲಾಯಿಸುತ್ತಿದ್ದು, ಲೋಕಾಯುಕ್ತ ತನಿಖೆಯಿಂದ ಸಾಬೀತಾದ ಹಗರಣಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ಅವರು ಮಾತನಾಡಿರುವುದು ಸರಿಯಲ್ಲ ಎಂದು ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಮಾಧ್ಯಮಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋಹನ್ ದಾಸರಿ “ಮುನಿರತ್ನರವರು 2013ರಿಂದಲೂ ನಿರಂತರವಾಗಿ ರಾಜರಾಜೇಶ್ವರಿ ನಗರದ ಶಾಸಕರಾಗಿದ್ದಾರೆ. ಕಾಂಗ್ರೆಸ್ನಿಂದ ಗೆದ್ದು ಬಿಜೆಪಿಯ ಆಮಿಷಕ್ಕೊಳಗಾಗಿ ಜುಲೈ 25, 2019ರಂದು ಅನರ್ಹಗೊಂಡ ನಂತರವೂ ಅವರು ಶಾಸಕರಾಗಿ ಅಧಿಕಾರ ಚಲಾಯಿಸುತ್ತಿದ್ದರು. ಆ ಅವಧಿಯಲ್ಲಿ ಕೂಡ ಅವರು ಶಾಸಕರಂತೆ ಅಧಿಕಾರಿಗಳ ಸಭೆ ನಡೆಸಿರುವುದು ಮಾಧ್ಯಮಗಳಲ್ಲಿ ಹಲವು ಬಾರಿ ವರದಿಯಾಗಿದೆ. ಆದರೂ ಅವರು ತನಗೆ ಸಂಬಂಧವೇ ಇಲ್ಲವೆಂಬಂತೆ ಹೇಳಿಕೆ ನೀಡುತ್ತಿರುವುದು ಶಿಕ್ಷೆಯಿಂದ ನುಣುಚಿಕೊಳ್ಳುವ ತಂತ್ರ” ಎಂದು ಹೇಳಿದರು.
“ಮುನಿರತ್ನರವರು ಸುಳ್ಳು ಮಾಹಿತಿ ನೀಡಿ ಜನರನ್ನು ಹಾದಿ ತಪ್ಪಿಸುವ ಬದಲು ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುನಿರತ್ನರವರನ್ನು ಉಚ್ಚಾಟಿಸಬೇಕು. ಈ ಆಗ್ರಹಗಳನ್ನು ಮುಂದಿಟ್ಟುಕೊಂಡು ಫೆಬ್ರವರಿ 26ರ ಶನಿವಾರದಂದು ರಾಜರಾಜೇಶ್ವರಿ ನಗರದಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ಆಯೋಜಿಸಲಾಗಿದೆ. ಭ್ರಷ್ಟಾಚಾರ ವಿರೋಧಿ ನಿಲುವು ಹೊಂದಿರುವ ಸಾವಿರಾರು ಜನರು ಅದರಲ್ಲಿ ಭಾಗವಹಿಸಲಿದ್ದಾರೆ” ಎಂದು ಹೇಳಿದರು.
“ಸಂಸದ ಡಿ.ಕೆ.ಸುರೇಶ್ರವರನ್ನು ಆಮ್ ಆದ್ಮಿ ಪಾರ್ಟಿ ಏಕೆ ಪ್ರಶ್ನಿಸುತ್ತಿಲ್ಲ ಎಂಬ ಮುನಿರತ್ನರವರ ಪ್ರಶ್ನೆ ಹಾಸ್ಯಾಸ್ಪದ. ಸುರೇಶ್ರವರೇ ಲೋಕಾಯುಕ್ತರಿಗೆ ದೂರು ನೀಡಿದ್ದರು. ಹೀಗಿರುವಾಗ ಈ ಪ್ರಕರಣದಲ್ಲಿ ನಾವು ಅವರನ್ನು ಪ್ರಶ್ನಿಸುವ ಪ್ರಮೇಯವೇ ಬರುವುದಿಲ್ಲ. ಡಿ.ಕೆ.ಸುರೇಶ್ ಎಸಗಿರುವ ಅಕ್ರಮಗಳನ್ನು ಮುನಿರತ್ನ ಬಯಲಿಗೆಳೆದರೆ, ಆ ಅಕ್ರಮಗಳ ವಿರುದ್ಧ ಹೋರಾಟಕ್ಕೂ ಆಮ್ ಆದ್ಮಿ ಪಾರ್ಟಿ ಸಿದ್ಧವಾಗಿದೆ. ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣವು ನಮ್ಮ ಪಕ್ಷದ ಗುರಿಯಾಗಿದ್ದು, ಇಲ್ಲಿ ಪಕ್ಷ ಅಥವಾ ನಾಯಕರು ನಗಣ್ಯ” ಎಂದು ಮೋಹನ್ ದಾಸರಿ ಹೇಳಿದರು.
“2014ರಲ್ಲಿ ಬಿಬಿಎಂಪಿಯ 1016 ಫೈಲ್ಗಳನ್ನು ವೈಯಾಲಿಕಾವಲ್ನಲ್ಲಿನ ಅವರ ನಿವಾಸದಿಂದ ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದರು. 2018ರ ವಿಧಾನಸಭಾ ಚುನಾವಣೆ ವೇಳೆ ನಕಲಿ ಮತದಾರರ ಚೀಟಿ ಹಗರಣದಲ್ಲಿ ಮುನಿರತ್ನ ಭಾಗಿಯಾದ ಬಗ್ಗೆ ಬಿಜೆಪಿ ನಾಯಕರೇ ಕಾನೂನು ಸಮರ ಸಾರಿದ್ದರು. ನಂತರ ಅವರು ಬಿಜೆಪಿ ಸೇರಿದ್ದರಿಂದ ಪ್ರಕರಣವನ್ನು ವಾಪಸ್ ಪಡೆದರು. ಕಾಂಗ್ರೆಸ್ನಿಂದ ಗೆದ್ದು ಬಿಜೆಪಿಯ ಆಮಿಷಕ್ಕೆ ಒಳಗಾಗಿದ್ದಕ್ಕೆ ಜುಲೈ 25, 2019ರಂದು ಅವರನ್ನು ಅನರ್ಹ ಮಾಡಲಾಯಿತು. ಈಗ ವಿವಿಧ ಕಾಮಗಾರಿಗಳ ಹಗರಣವು ಲೋಕಾಯುಕ್ತ ತನಿಖೆಯಿಂದ ಸಾಬೀತಾಗಿದೆ. ಆದರೂ ಅವರು ಪ್ರಜಾಪ್ರಭುತ್ವದ ಉನ್ನತ ಹುದ್ದೆಗಳಲ್ಲಿ ಮುಂದುವರೆದಿರುವುದು ಆತಂಕಕಾರಿ ಬೆಳವಣಿಗೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಬೆಂಗಳೂರು ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಚನ್ನಪ್ಪಗೌಡ ನೆಲ್ಲೂರು ಹೇಳಿದರು.
https://youtu.be/nxjPaWF0q8c