ಮುಸ್ಲಿಂ ಸಮುದಾಯದ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ಅನ್ಯಕೋಮಿನ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿಯ ವೀರಭದ್ರ ನಗರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಐವರು ಮುಸ್ಲಿಂ ಸಮುದಾಯದ ವೇಷ ಧರಿಸಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಿದ್ದರು. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿ ಮಾರ್ಕೆಟ್ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ ಐವರು ಅನ್ಯಕೋಮಿನವರು ಎಂದು ಪತ್ತೆಯಾಗಿದ್ದು, ಸದ್ಯ ಐವರನ್ನು ವಶಕ್ಕೆ ಪಡೆದಿದ್ದಾರೆ. ಐವರು ಬೀದರ್ ಜಿಲ್ಲೆಯ ಹುಮ್ನಾಬಾದ್ನವರಾಗಿದ್ದು, ಹೊಟ್ಟೆಪಾಡಿಗಾಗಿ ಮುಸ್ಲಿಂ ಸಮುದಾಯದ ವೇಷ ತೊಟ್ಟು ಭಿಕ್ಷೆ ಬೇಡುತ್ತಿದ್ದರು ಎನ್ನಲಾಗಿದೆ.
ಹಿಜಾಬ್ ವಿವಾದ ಮಧ್ಯೆ ಅನ್ಯಕೋಮಿನವರು ಮುಸ್ಲಿಂ ಸಮುದಾಯದ ವೇಷ ಧರಿಸಿದ್ದರಿಂದ ಕೆಲ ಕಾಲ ಗೊಂದಲದ ನಿರ್ಮಾಣವಾಗಿತ್ತು. ಸದ್ಯ ಆರೋಪಿಗಳ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.