ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಕನ್ನಡಿಗ ವಿದ್ಯಾರ್ಥಿ ನವೀನ್ ಮೃತಪಟ್ಟಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ. ನವೀನ್ ಮೃತದೇಹದ ಫೋಟೋವನ್ನು ಅವರ ಸ್ನೇಹಿತರು ಕಳುಹಿಸಿದ್ದಾರೆ.
ಸದ್ಯ ಖಾರ್ಕಿವ್ ನಲ್ಲಿ ನವೀನ್ ಮೃತದೇಹ ಇದ್ದು, ಇಂದು ಭಾರತಕ್ಕೆ ಸಾಗಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಉಕ್ರೇನ್ ರಾಯಭಾರಿ ಕಚೇರಿ ಮೂಲಕ ನವೀನ್ ಪಾರ್ಥಿವ ಶರೀರ ವಾಪಸ್ ತರಲು ಯತ್ನ ಮಾಡಲಾಗುತ್ತಿದೆ. ಅಧಿಕಾರಿಗಳ ಹಂತದಲ್ಲಿ ಮಾತುಕತೆ ಈಗಾಗಲೇ ನಡೆದಿದ್ದು, ಖಾರ್ಕಿವ್ ನಿಂದ ಇಂದು ಗಡಿಗೆ ರಸ್ತೆ ಮಾರ್ಗವಾಗಿ ಮೃತ ದೇಹ ಸಾಗಿಸುವ ಸಾಧ್ಯತೆ ಇದೆ. ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ರವಾನಿಸಲು ಚಿಂತನೆ ನಡೆಸಲಾಗಿದ್ದು, ದೆಹಲಿ ಮೂಲಕ ರಾಜ್ಯ ಸರ್ಕಾರಕ್ಕೆ ಒಪ್ಪಿಸಲು ಯೋಜನೆ ರೂಪಿಸಲಾಗಿದೆ.
ರಷ್ಯಾ-ಉಕ್ರೇನ್ ನಡುವಿನ ಯುದ್ಧದ ತೀವ್ರಗೊಳ್ಳುತ್ತಿದೆ. ಆದಷ್ಟು ಬೇಗ ಉಕ್ರೇನ್ ತೊರೆಯಿರಿ ಎಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟ ಬೆನ್ನಲ್ಲೇ ರಷ್ಯಾ ಶೆಲ್ ದಾಳಿಗೆ ಕನ್ನಡಿಗ ನವೀನ್ (22) ಬಲಿಯಾಗಿದ್ದಾರೆ. ಖಾರ್ಕೀವ್ನಲ್ಲಿ ಮೆಡಿಕಲ್ ಓದುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಚಳಗೇರಿಯ ನವೀನ್ ದುರಂತ ಸಾವನ್ನಪ್ಪಿದ್ದಾರೆ. ಖಾರ್ಕೀವ್ನಲ್ಲಿ ಇವತ್ತು ಬೆಳಗ್ಗೆ 7 ಗಂಟೆಗೆ ಸೂಪರ್ ಮಾರ್ಕೆಟ್ಗೆ ಹೋಗಿ ಸಾಲಿನಲ್ಲಿ ನಿಂತಿದ್ದಾಗ ನವೀನ್ ದುರ್ಮರಣಕ್ಕೀಡಾಗಿದ್ದಾರೆ.