ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದಂತೆ ಬಿಜೆಪಿಗೆ ಯಾರೂ ಹೋಗುವುದಿಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಅಶೋಕ್ ವಿಜಯೇಂದ್ರ ಯತ್ನಾಳ್ ಒಬ್ಬರ ಮೇಲೆ ಒಬ್ಬರು ಕೆಸರೆರೆಚಾಟದಲ್ಲಿ ತಲ್ಲಿನರಾಗಿದ್ದಾರೆ. ವಿಪಕ್ಷವಾಗಿ ಬಿಜೆಪಿ ವಿಫಲವಾಗಿದೆ. 236 ತಾಲೂಕುಗಳ ಪೈಕಿ 216 ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಕೇಂದ್ರ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲು ಯಾವ ಪ್ರಯತ್ನವನ್ನು ಮಾಡುತ್ತಲೇ ಇಲ್ಲ. ಡಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ರೈತರ ಹಿತ ಕಾಯಲು ಪ್ರಧಾನ ಮಂತ್ರಿ ಅವರಿಗೆ ಒತ್ತಡ ತರಬಹುದಿತ್ತ, ಆದರೆ ಅಧಿಕಾರಕ್ಕಾಗಿ ಕಚ್ಚಾಟ ಮಾಡುತ್ತ ಕಾಲ ಕಳೆಯುತ್ತಿದ್ದಾರೆ.
ಬಿಜೆಪಿ ಬಿ ಟೀಮ್ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಎ ಟೀಮ್ ಗಿಂತ ಬಿ ಟೀಮ್ ಸ್ಟ್ರಾಂಗ್ ಎಂದು ತೋರಿಸಲು ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಲೋಕಸಭೆ ಚುನಾವಣೆ ನಂತರ 50 ಜನ ಶಾಸಕರು ಪಕ್ಷಾಂತರ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ಸಿನ ಎಲ್ಲಾ ಶಾಸಕರು ಪಕ್ಷಕ್ಕೆ ಬದ್ಧರಾಗಿದ್ದಾರೆ. ಮುಳುಗುತ್ತಿರುವ ಹಡಗು ಬಿಜೆಪಿಗೆ ಯಾರು ಹೋಗುವುದಿಲ್ಲ.
50 ಜನ ಶಾಸಕರು ಯಾರ ನಾಯಕತ್ವದಲ್ಲಿ ಬಿಜೆಪಿಗೆ ಹೋಗುತ್ತಾರೆ ? ಅದನ್ನ ಬಹಿರಂಗಪಡಿಸಿ. ಸುಳ್ಳು ಹೇಳಿಕೆ ನೀಡುವ ಮೂಲಕ ರಾಜ್ಯದ ಮತದಾರರಿಗೆ ನೀವು ಅಪಮಾನ ಮಾಡಿದ್ದೀರಿ.
ಕುಮಾರಸ್ವಾಮಿಯವರು ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರುತ್ತದೆ ಎಂದು ಭ್ರಮೆಯಲ್ಲಿ ಇದ್ದರು. ಅದರಲ್ಲಿ ನಾನು ಮೀನನ್ನು ಗಾಳ ಹಾಕಬಹುದು ಎಂದುಕೊಂಡಿದ್ದರು.
ರಾಜ್ಯದ ಜನರು ನಮಗೆ ಸ್ಪಷ್ಟ ಬಹುಮತ ನೀಡುವ ಮೂಲಕ ಉತ್ತರ ಕೊಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯದ ಜನರು ಕಾಂಗ್ರೆಸ್ ಪಕ್ಷದ 20 ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂದು ಉಗ್ರಪ್ಪ ಅವರು ಹೇಳಿದ್ದಾರೆ.