ಯುದ್ಧ ಆರಂಭವಾದ ದಿನದಿಂದ ಭಾನುವಾರದವರೆಗೆ ರಾಜ್ಯದ 458 ವಿದ್ಯಾರ್ಥಿಗಳು ಉಕ್ರೇನ್ನಿಂದ ತಾಯ್ನಾಡಿಗೆ ಆಗಮಿಸಿದ್ದು, ಇನ್ನೂ ರಾಜ್ಯದ 226 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಅವರು ಮಾಹಿತಿ ನೀಡಿದ್ದಾರೆ.
ಉಕ್ರೇನ್ ನಿಂದ 47 ಬ್ಯಾಚ್ ಗಳಲ್ಲಿ ಒಟ್ಟು 458 ವಿದ್ಯಾರ್ಥಿಗಳು ರಾಜ್ಯಕ್ಕೆ ವಾಪಸ್ ಬಂದಿದ್ದಾರೆ. ಇನ್ನೂ 226 ಜನರು ಬರಬೇಕಿದೆ. ಸೋಮವಾರ 10 ವಿಮಾನಗಳು ಬರಲಿದ್ದು, ಅದರಲ್ಲಿ ಒಂದಷ್ಟು ಜನರು ವಾಪಸ್ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ನವೀನ್ ಮೃತದೇಹ ತರುವ ಕುರಿತು ಮಾತನಾಡಿ, ಉಕ್ರೇನ್ ನ ಖಾರ್ಕೀವ್ ನಲ್ಲಿ ಮೃತಪಟ್ಟ ಹಾವೇರಿಯ ನವೀನ್ ಮೃತದೇಹವನ್ನು ತರುವ ಪ್ರಯತ್ನ ನಡೆಯುತ್ತಿದೆ. ಈ ಸಂಬಂಧ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರೊಂದಿಗೆ ರಾಜ್ಯ ಸರ್ಕಾರ ಸಂಪರ್ಕದಲ್ಲಿದ್ದು, ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಮರಳಿ ಭಾರತಕ್ಕೆ ಕರೆತರುವ ಪ್ರಯತ್ನಗಳು ಮುಂದುವರೆದಿವೆ. ನವೀನ್ ಮೃತದೇಹ ಶವಾಗಾರದಲ್ಲಿಯೇ ಉಳಿದಿದ್ದು, ಮೃತದೇಹವನ್ನು ತರುವ ಕುರಿತು ರಾಯಭಾರಿ ಕಚೇರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವೈದ್ಯಕೀಯ ವಿದ್ಯಾರ್ಥಿ ರಕ್ಷಿತ್ ರವಿ ಗಣಿ ಅವರು ಮಾತನಾಡಿ, ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಖಾರ್ಕೀವ್ ನಿಂದ 500 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದು, ಇದರಲ್ಲಿ ರಾಜ್ಯದ 80 ಮಂದಿ ವಿದ್ಯಾರ್ಥಿಗಳಿದ್ದಾರೆ. ರಾಯಭಾರಿ ಕಚೇರಿಯ ಅಧಿಕಾರಿಗಳು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ನಾವೀಗ ರೈಲು ಹತ್ತಲು ಪ್ರಯತ್ನ ನಡೆಸುತ್ತಿದ್ದೇವೆ.