ADVERTISEMENT
ಮುಂದೊಂದು ದಿನ ಭಾರತದ ಭಾವುಟದ ಜಾಗದಲ್ಲಿ ಕೆಸರು ಭಾವುಟ ಹಾರಾಡಲಿದೆ ಎಂದಿರುವ ಪ್ರಭಾಕರ ಭಟ್ ಬಿಜೆಪಿಯವರೋ, ಆರ್ ಎಸ್ ಎಸ್ ನವರೋ, ಅವರ ಹಿನ್ನಲೆ ನನಗೆ ಗೊತ್ತಿಲ್ಲ. ಅವರ ಬಗ್ಗೆ ಮಾತನಾಡುವುದರಲ್ಲಿ ಅರ್ಥ ಇಲ್ಲ.
ಒಬ್ಬ ಮಂತ್ರಿ ರಾಷ್ಟ್ರ ಧ್ವಜ ವಿಚಾರವಾಗಿ ಮಾತನಾಡಿದಾಗ ನಾವು ಆರು ದಿನ ಅಹೋರಾತ್ರಿ ಧರಣಿ ಮಾಡಿದಾಗ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಏನು ಹೇಳಬೇಕಿತ್ತೋ ಅದನ್ನ ಹೇಳಿದ್ದಾರೆ. ನಮ್ಮ ಹೋರಾಟದ ಹಿಂದಿನ ಅರ್ಥ ಹಾಗೂ ನಡ್ಡಾ ಅವರ ಮಾತು ಒಂದೇ ಆಗಿದೆ.
ಹೀಗಾಗಿ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಇವರೆಲ್ಲ ರಾಷ್ಟ್ರವಿರೋಧಿ ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ.
ಬಿಜೆಪಿ ಭಾವನಾತ್ಮಕ ವಿಚಾರ ಇಟ್ಟುಕೊಂಡೇ ಮುನ್ನಡೆಯುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಜನ ದಡ್ಡರಲ್ಲ. ಬಿಜೆಪಿಯವರು ಸಮಾಜ ಒಡೆಯಲು ಏನು ಬೇಕೋ ಅದನ್ನು ಮಾಡುತ್ತಿದ್ದಾರೆ. ನಿನ್ನೆ ಇವರು ಭಗವದ್ಗೀತೆ ವಿಚಾರವಾಗಿ ಮಾತನಾಡಿದ್ದಾರೆ. ನಮ್ಮ ನಾಯಕ ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿ ಆಗಿದ್ದ ಸಂದರ್ಭದಲ್ಲಿ ದೂರದರ್ಶನದಲ್ಲಿ ಮಹಾಭಾರತ, ರಾಮಾಯಣವನ್ನು ಜನರಿಗೆ ತೋರಿಸಿ, ಭಾರತದ ಹಿಂದೂ ಧರ್ಮದ ಮಹಾನ್ ಗ್ರಂಥಗಳ ಬಗ್ಗೆ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಗುವಂತೆ ಮಾಡಿದ್ದಾರೆ. ಈಗಾಗಲೇ ಭಗವದ್ಗೀತೆಯ ಕೆಲವು ಅಂಶಗಳು ಪುಸ್ತಕಗಳಲ್ಲಿ ಇವೆ’ ಎಂದು ಉತ್ತರಿಸಿದರು.
ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಗೊಂದಲ ಇವೆಯೇ ಎಂಬ ಪ್ರಶ್ನೆಗೆ, ‘ಯಾವುದೇ ಗೊಂದಲ ಇಲ್ಲ. ನಾವೆಲ್ಲ ಹಿಂದೂಗಳು. ಕರ್ನಾಟಕ ಹಾಗೂ ಶಾಲಾ ಮಕ್ಕಳ ವಿಚಾರ ಇರಲಿ, ಇಡೀ ದೇಶಕ್ಕೆ ರಾಜೀವ್ ಗಾಂಧಿ ಅವರು ಚಿಕ್ಕ ಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಮಹಾಭಾರತ ಹಾಗೂ ರಾಮಾಯಣವನ್ನು ತೋರಿಸಿ ಈ ಪವಿತ್ರ ಗ್ರಂಥಗಳ ಸಂದೇಶದ ಬಗ್ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ’ ಎಂದರು.
ರಾಜ್ಯದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಸೇರಿದಂತೆ ಸಾಕಷ್ಟು ಗಂಭೀರ ವಿಚಾರಗಳಿವೆ. ಕಬ್ಬಿಣದ ಬೆಲೆ 90 ಸಾವಿರದಿಂದ 1 ಲಕ್ಷದ ವರೆಗೆ ಮುಟ್ಟಿದೆ. ಸೀಮೆಂಟ್ ಚೀಲಕ್ಕೆ ₹450 ಆಗಿದೆ. ಇವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸಣ್ಣ ಮನೆ ಕಟ್ಟುವವರ ಕಥೆ ಏನಾಗಬೇಕು? ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ನೆಮ್ಮದಿ ಸೂಚ್ಯಂಕದಲ್ಲಿ ಭಾರತ 160 ನೇ ಸ್ಥಾನ ಪಡೆದಿದೆ. ಅಂದರೆ ನಮ್ಮ ದೇಶದ ಜನ ನೆಮ್ಮದಿಯಾಗಿಲ್ಲ ಎಂದು ಸೂಚಿಸುತ್ತದೆ.
ರೈತರ ರಾಗಿ ಖರೀದಿಸಿ ಶೋಭಕ್ಕ:
‘ಶೋಭ ಕರಂದ್ಲಾಜೆ ಅವರು ಕೃಷಿ ಮಂತ್ರಿಗಳಾಗಿದ್ದಾರೆ. ಅವರು ನಮ್ಮ ಪಕ್ಷದ ಬಗ್ಗೆ ಮಾತನಾಡುವ ಬದಲು ರಾಗಿ, ಭತ್ತ, ಜೋಳಕ್ಕೆ ಬೆಂಬಲ ಬೆಲೆ ಕೊಡಿಸಕ್ಕ. ಆಮೇಲೆ ನಮ್ಮ ಬಗ್ಗೆ ಮಾತನಾಡುವಿರಂತೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಕೂತಿದ್ದೀರಾ. ರಾಗಿ ಖರೀದಿಗೆ ಹಾಕಿರುವ ನಿರ್ಬಂಧ ತೆಗೆದು ಹಾಕಿ ರೈತರಿಂದ ರಾಗಿ ಖರೀದಿ ಮಾಡಿ. ಅದು ನಿಮ್ಮ ಕರ್ತವ್ಯ.’
ADVERTISEMENT