ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣವನ್ನು ಖಂಡಿಸುವ ಹಾಗೂ ಉಕ್ರೇನ್ನಿಂದ ತನ್ನ ಸಂಪೂರ್ಣ ಸೇನೆಯನ್ನು ತಕ್ಷಣವೇ ಬೇಷರತ್ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ಮತದಾನ ಮಾಡದೇ ಭಾರತ ದೂರ ಉಳಿದಿದೆ.
ಅಮೆರಿಕ ಮತ್ತು ಅಲ್ಬೇನಿಯಾ ನೇತೃತ್ವದಲ್ಲಿ ರಚನೆಯಾದ ಕರಡು ನಿರ್ಣಯದ ಮೇಲೆ ಯುಎನ್ಎಸ್ಸಿಯಲ್ಲಿ ಮತ ಚಲಾವಣೆ ನಡೆಯಿತು. ಭಾರತ, ಚೀನಾ ಮತ್ತು ಯುಎಇ ಮತದಾನದಿಂದ ದೂರ ಉಳಿದಿದ್ದು, ಪೋಲೆಂಡ್, ಇಟಲಿ, ಜರ್ಮನಿ, ಎಸ್ಟೋನಿಯಾ, ಲುಕ್ಸಂಬರ್ಗ್ ಮತ್ತು ನ್ಯೂಜಿಲೆಂಡ್ ಸೇರಿದಂತೆ 11 ರಾಷ್ಟ್ರಗಳು ನಿರ್ಣಯವನ್ನು ಬೆಂಬಲಿಸಿವೆ.
ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾ, ನಿರ್ಣಯವನ್ನು ನಿರ್ಬಂಧಿಸುವ ತನ್ನ ವೀಟೊ ಅಧಿಕಾರವನ್ನು ಬಳಸಿಕೊಂಡಿದೆ.
In UN Security Council meeting on #Ukraine today, India abstained on the vote on draft resolution.
Our Explanation of Vote ⤵️ pic.twitter.com/w0yQf5h2wr
— Amb T S Tirumurti (@ambtstirumurti) February 25, 2022
ಭಾರತವು ರಷ್ಯಾದೊಂದಿಗೆ ಬಲವಾದ ರಕ್ಷಣಾ ಸಂಬಂಧ ಹೊಂದಿದೆ. ಹೀಗಾಗಿ, ನಿರ್ಣಯದ ವಿಚಾರವಾಗಿ ಭಾರತದ ನಿಲುವು ಏನು ಎಂಬುದು ಎಲ್ಲರ ಗಮನ ಸೆಳೆದಿತ್ತು. ಯುಎನ್ಎಸ್ಸಿ ನಿರ್ಣಯದಿಂದ ದೂರ ಉಳಿದಿರುವ ಬಗ್ಗೆ ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್. ತಿರುಮೂರ್ತಿ ಅವರು ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಉಕ್ರೇನ್ ಬಿಕ್ಕಟ್ಟು ಕುರಿತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ದೂರವಾಣಿ ಮೂಲಕ ಮಾತನಾಡಿದ್ದರು. ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸುವಂತೆ ಮತ್ತು ರಾಜತಾಂತ್ರಿಕ ಮಾರ್ಗ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದ್ದರು.