ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ರಾಜ್ಯ ಸರ್ಕಾರದ ಪರವಾಗಿ ಹರ್ಷ ಕುಟುಂಬಕ್ಕೆ ಪರಿಹಾರ ಚೆಕ್ ನೀಡಿದರು.
ಶಿವಮೊಗ್ಗದ ಸೀಗೆಹಟ್ಟಿಯಲ್ಲಿರುವ ಹರ್ಷ ನಿವಾಸ ಇಂದು, ಭಾನುವಾರ ಭೇಟಿ ನೀಡಿದ ಯಡಿಯೂರಪ್ಪನವರು ಹರ್ಷ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಸಾಥ್ ನೀಡಿದರು.
26 ವರ್ಷದ ಹರ್ಷ ಎಲ್ಲರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ. ಹಿಂದೂ ಯುವಮುಖಂಡನಾಗಿ ಹರ್ಷ ಬೆಳೆಯುತ್ತಿದ್ದ. ಇದನ್ನೂ ಸಹಿಸಕ್ಕಾಗದೇ ಕೆಲವು ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ. ಇದು ಅತ್ಯಂತ ಅಮಾನವೀಯ ಕೃತ್ಯ. ಹರ್ಷನ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರದ ಕಡೆಯಿಂದ 25 ಲಕ್ಷ ರೂ. ಚೆಕ್ ಕೊಟ್ಟಿದ್ದೇನೆ. ಆದರೆ ಹಣ ಮುಖ್ಯ ಅಲ್ಲ. ಹರ್ಷನನ್ನು ಕಳೆದುಕೊಂಡ ಕುಟುಂಬದ ನೋವು ದೊಡ್ಡದು. ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂಬುವ ಪ್ರಾರ್ಥನೆ ಬಿಟ್ಟರೆ ನಮ್ಮ ಕೈಯಲ್ಲಿ ಏನೂ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.
ಇತ್ತೀಚಿಗೆ ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂಪರ ಕಾರ್ಯಕರ್ತ ಶ್ರೀ ಹರ್ಷ ಅವರ ಭಾವಚಿತ್ರಕ್ಕೆ ಇಂದು ಪುಷ್ಪನಮನ ಸಲ್ಲಿಸಲಾಯಿತು. ನಂತರ ಅವರ ಮನೆಗೆ ಭೇಟಿ ನೀಡಿ, ಹರ್ಷ ಅವರ ತಂದೆ, ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಲಾಯಿತು. pic.twitter.com/VZ1BrQ99CI
— B.S.Yediyurappa (Modi Ka Parivar) (@BSYBJP) March 6, 2022
ಫೆಬ್ರವರಿ 20 ರಂದು ಕ್ಯಾಂಟೀನ್ವೊಂದರ ಬಳಿ ಟೀ ಕುಡಿಯುತ್ತಾ ನಿಂತಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷನ ಮೇಲೆ ಯುವಕರ ಗುಂಪೊಂದು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿತ್ತು. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದನು. ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು.