ಸಕ್ರಿಯ ರಾಜಕಾರಣಕ್ಕೆ ಕಾಂಗ್ರೆಸ್ನ ಹಿರಿಯ ನಾಯಕ, ಧೀಮಂತ ರಾಜಕಾರಣಿ ಎಕೆ ಆ್ಯಂಟನಿಯವರು ಇಂದು ದೆಹಲಿ ಹಾಗೂ ಪಾರ್ಲಿಮೆಂಟ್ ಚುನಾವಣೆಗೆ ವಿದಾಯ ಘೋಷಿಸಿದ್ದಾರೆ.
81 ವರ್ಷದ ಆ್ಯಂಟನಿಯವರ ರಾಜ್ಯಸಭಾ ಸದಸ್ಯತ್ವ ಇದೇ ಏಪ್ರೀಲ್ 2 ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಮರು ಆಯ್ಕೆ ಮಾಡದಂತೆ ಕಾಂಗ್ರೆಸ್ನ ಅಧಿನಾಯಕಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಶಾಸಕಾಂಗ ಬಲವನ್ನು ಹೊಂದಿದ್ದರೂ ಸಹ ಅವರು ಮರು ಆಯ್ಕೆ ಬಯಸಿಲ್ಲ. ಇದೀಗ, ಅವರು ಮರಳಿ ದೆಹಲಿಯಿಂದ ಕೇರಳದ ತಿರುವನಂತಪುರಂಗೆ ಬಂದಿದ್ದಾರೆ.
1970 ರಲ್ಲಿ ಕೇರಳದಲ್ಲಿ ಶಾಸಕನಾಗಿ ಮೊದಲ ಬಾರಿಗೆ ಆಯ್ಕೆಯಾದ ನಂತರ ಇಲ್ಲಿಯವರೆಗಿನ ಅವರ ವಿಧಾನ ಸಭೆ ಹಾಗೂ ಪಾರ್ಲಿಮೆಂಟ್ ರಾಜಕೀಯದ ಸುಮಾರು 52 ವರ್ಷಗಳ ರಾಜಕಾರಣಕ್ಕೆ ವಿದಾಯ ನೀಡಿದ್ದಾರೆ.
ಎಕೆ ಆ್ಯಂಟನಿಯವರು ರಾಜಕೀಯ ಮುತ್ಸದ್ದಿಯಾಗಿದ್ದಾರೆ. ಕೇರಳದಲ್ಲಿ 3 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.ಅಲ್ಲದೇ, ತಮ್ಮ 37 ನೇ ವಯಸ್ಸಿಗೆ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಮೂಲಕ ಅತಿ ಕಿರಿಯ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಇಷ್ಟೇ ಅಲ್ಲದೇ ಇವರು, 10 ವರ್ಷಗಳ ಕಾಲ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, 5 ಬಾರಿ ಶಾಸಕರಾಗಿ, 3 ಬಾರಿ ಕೇಂದ್ರ ಮಂತ್ರಿಯಾಗಿ ಹಾಗೂ ರಾಜ್ಯಸಭೆಯಲ್ಲಿಯೂ 5 ಅವಧಿಗಳನ್ನು ಕಳೆದಿದ್ದಾರೆ.
ಆ್ಯಂಟನಿಯವರು ಕಳೆದ ವರ್ಷದ ಕೇರಳ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೇ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸುವ ಬಗ್ಗೆ ಹೇಳಿದ್ದರು. ಆದರೆ, ಇದೀಗ ಅಧಿಕೃತವಾಗಿ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.