ಬಜರಂಗದಳ ಕಾರ್ಯಕರ್ತ ಹರ್ಷ ಬರ್ಬರ ಹತ್ಯೆ ನಂತರ ಎರಡು ದಿನ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಶಿವಮೊಗ್ಗ ಬಹುತೇಕ ಶಾಂತವಾಗಿದೆ. ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದರೂ, ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ನೀಡಿ ಫೆ.25 ರ ವರೆಗೂ ಕರ್ಪ್ಯೂ ವಿಸ್ತರಣೆ ಮಾಡಲಾಗಿದೆ.
ಮಂಗಳವಾರ ಮುಂಜಾನೆ ಟಿಪ್ಪುನಗರ ಮತ್ತು ಕೊರಮರಕೇರಿಯಲ್ಲಿ ಮನೆ ಎದುರು ನಿಲ್ಲಿಸಿದ್ದ 2 ಆಟೋ ಹಾಗೂ 1 ದ್ವಿಚಕ್ರ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಬಿಟ್ಟರೆ, ಹಿಂಸಾಚಾರದ ಬೇರಿನ್ಯಾವ ಘಟನೆಗಳೂ ವರದಿಯಾಗಿಲ್ಲ. ಆದರೂ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಗರಾದ್ಯಂತ ಬುಧವಾರ ಬೆಳಗ್ಗೆವರೆಗೆ ಜಾರಿಗೊಳಿಸಲಾಗಿದ್ದ ಕರ್ಫ್ಯೂವನ್ನು ಇನ್ನೆರಡು ದಿನ ಅಂದರೆ ಶುಕ್ರವಾರದವರೆಗೆ ವಿಸ್ತರಿಸಲಾಗಿದೆ. ಅದರಂತೆ ಶಿವಮೊಗ್ಗ ನಗರದ ಶಾಲಾ-ಕಾಲೇಜುಗಳಿಗೂ 25 ರವರೆಗೂ ರಜೆ ಘೋಷಿಸಲಾಗಿದೆ.
ಶಿವಮೊಗ್ಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭದ್ರತೆಗಾಗಿ ಮೂವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಓರ್ವ ಹೆಚ್ಚುವರಿ ರಕ್ಷಣಾಧಿಕಾರಿ, 12 ಡಿವೈಎಸ್ಪಿ, 39 ಪೊಲೀಸ್ ಇನ್ಸ್ಪೆಕ್ಟರ್, 54 ಪಿಎಸ್ಐ, 48 ಎಎಸ್ಐ, 20 ಕೆಎಸ್ಆರ್ಪಿ ತುಕಡಿ, 10 ಡಿಎಆರ್ ತುಕಡಿ ಮತ್ತು 1 ಆರ್ಎಎಫ್ ತುಕಡಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.