ಭೂಮಾಪನ, 11–ಇ ನಕ್ಷೆ, ಭೂ ಪರಿವರ್ತನೆ ಮತ್ತು ತತ್ಕಾಲ್ ಪೋಡಿಗೆ ಶುಲ್ಕ ಹೆಚ್ಚಳ ಮಾಡಿದ್ದ ಕಂದಾಯ ಇಲಾಖೆ, ಮತ್ತೊಮ್ಮೆ ಪರಿಷ್ಕರಿಸಿ ಶುಲ್ಕ ಕಡಿಮೆ ಮಾಡಿ ಆದೇಶ ಹೊರಡಿಸಿದೆ.
11–ಇ ನಕ್ಷೆ, ಭೂ ಪರಿವರ್ತನೆ ಮತ್ತು ತತ್ಕಾಲ್ ಪೋಡಿಗೆ ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆಗೆ 2,000 ರೂ. ಹಾಗೂ ನಂತರದ ಪ್ರತಿ ಎಕರೆಗೆ 400 ರೂ. ರಂತೆ ಗರಿಷ್ಠ 4,000 ರೂ. ನಿಗದಿ ಮಾಡಿತ್ತು. ಸಾರ್ವಜನಿಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಅದನ್ನು ಕಡಿಮೆ ಮಾಡಿರುವ ಕಂದಾಯ ಇಲಾಖೆ, ಎರಡು ಎಕರೆಗೆ 1,500 ರೂ. ಹಾಗೂ ಪ್ರತಿ ಎಕರೆಗೆ 400 ರೂ. ರಂತೆ ನಿಗದಿ ಮಾಡಿದೆ. ಆದರೆ, ಗರಿಷ್ಠ ಮಿತಿಯನ್ನು ನಿಗದಿ ಮಾಡಿಲ್ಲ.
ನಗರ ಪ್ರದೇಶದಲ್ಲಿ ಎರಡು ಎಕರೆವರೆಗೂ 2,500 ರೂ. ಮತ್ತು ನಂತರದ ಪ್ರತಿ ಎಕರೆಗೆ 1,000 ರೂ. ದಂತೆ ಗರಿಷ್ಠ 5,000 ರೂ. ದವರೆಗೆ ಶುಲ್ಕ ವಿಧಿಸಲು ಅನುಮತಿ ನೀಡಲಾಗಿತ್ತು. ಪರಿಷ್ಕರಣೆ ಆದೇಶದಲ್ಲಿ ನಗರ ಪ್ರದೇಶದ ಶುಲ್ಕದಲ್ಲಿ ಬದಲಾವಣೆ ಆಗಿಲ್ಲ. ಆದರೆ, ಗರಿಷ್ಠ ಮಿತಿ ಕೈಬಿಡಲಾಗಿದೆ.
ಹದ್ದುಬಸ್ತು ಅರ್ಜಿ ಶುಲ್ಕ ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆವರೆಗೆ 1,500 ರೂ. ಹಾಗೂ ನಂತರದ ಪ್ರತಿ ಎಕರೆಗೆ 300 ರೂ. ರಂತೆ ಗರಿಷ್ಠ 3,000 ರೂ. ನಿಗದಿ ಮಾಡಿತ್ತು. ಅದನ್ನು ಪರಿಷ್ಕರಿಸಿ ಎರಡು ಎಕರೆವರೆಗೂ 500 ರೂ. ನಂತರದ ಪ್ರತಿ ಎಕರೆಗೆ 300 ರೂ. ನಿಗದಿ ಮಾಡಲಾಗಿದೆ. ನಗರ ಪ್ರದೇಶದಲ್ಲಿ ಹದ್ದುಬಸ್ತು ಅರ್ಜಿಗೆ ಎರಡು ಎಕರೆವರೆಗು 2,000 ರೂ ನಂತರ ಪ್ರತಿ ಎಕರೆಗೆ 400 ರೂ. ರಂತೆ ಗರಿಷ್ಠ 4,000 ರೂ. ನಿಗದಿ ಮಾಡಲಾಗಿತ್ತು. ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಗ್ರಾಮೀಣ ಮತ್ತು ನಗರ ಪ್ರದೇಶ ಎರಡೂ ಕಡೆ ಗರಿಷ್ಠ ಮಿತಿ ಕೈಬಿಡಲಾಗಿದೆ.