ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಳೆದ ವರ್ಷ ಅಕ್ಟೋಬರ್ 29 ರಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಪ್ಪು ನಿಧನದಿಂದ ಕರ್ನಾಟಕ ರಾಜ್ಯ ಮಾತ್ರವಲ್ಲದೇ, ದೇಶದ – ವಿದೇಶಗಳಲ್ಲಿನ ಇವರ ಅಭಿಮಾನಿಗಳಲ್ಲಿ ತೀವ್ರ ದು:ಖವನ್ನುಂಟುಮಾಡಿತ್ತು. ಕಂಠೀರವ ಕ್ರೀಡಾಂಗಣದಲ್ಲಿನ ಇವರ ಪಾರ್ಥಿವ ಶರೀರವನ್ನು 20 ಲಕ್ಷಕ್ಕಿಂತಲೂ ಅಧಿಕ ಅಭಿಮಾನಿಗಳು ದರ್ಶನ ಪಡೆದಿದ್ದರು. ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿಯವರು ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಘೋಷಣೆಯನ್ನು ಮಾಡಿದ್ದಾರೆ.
ಇದೀಗ, ಮೈಸೂರು ವಿಶ್ವವಿದ್ಯಾಲಯ ಪುನೀತ್ ಅವರ ಸಿನಿಮಾ ಮತ್ತು ಸಾಮಾಜಿಕ ಕಾರ್ಯಗಳನ್ನು ಮೆಚ್ಚಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದ್ದು, ಇದೇ ತಿಂಗಳ 22ರಂದು ನಡೆಯಲಿರುವ ವಿಶ್ವ ವಿದ್ಯಾಲಯದ 102ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ವಿವಿ ಕುಲಪತಿ ಘೋಷಿಸಿದ್ದಾರೆ.